ADVERTISEMENT

ಮರಣ ಪತ್ರ ಬರೆದಿಟ್ಟು ಖಾಸಗಿಕಂಪನಿ ಉದ್ಯೋಗಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:34 IST
Last Updated 22 ಸೆಪ್ಟೆಂಬರ್ 2019, 19:34 IST
   

ಬೆಂಗಳೂರು: ‘ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಮತ್ತು ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕನ ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಆರೋಪಿಸಿ ಮರಣ ಪತ್ರ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಟರಾಯನಪುರದಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತನ ಪತ್ನಿ, ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ‘ಶಿಕ್ಷಕಿಯಾಗಿರುವ ನಾನು ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೋಗಿದ್ದೆ. ಆಗ ಪತಿ ಮನೆಯಲ್ಲೇ ಇದ್ದರು.ಮಧ್ಯಾಹ್ನ 2.30ರ ಸುಮಾರಿಗೆ ಕರೆ ಮಾಡಿದ ನನ್ನ ತಾಯಿ, ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು. ತಕ್ಷಣ ಮನೆಗೆ ವಾಪಸಾದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತಿ ಬರೆದಿಟ್ಟಿದ್ದ ಪತ್ರವೊಂದು ಸಿಕ್ಕಿದೆ. ‘ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಅಲೋಕ್‌ ಕುಮಾರ್‌ ಮತ್ತು ಎಚ್‌ಆರ್‌ ವಿಭಾಗದ ಮೆನೇಜರ್‌ ತಿಮ್ಮಯ್ಯ ನೀಡುತ್ತಿದ್ದ ಮಾಸಿಕ ಕಿರುಕುಳ ನನ್ನ ಸಾವಿಗೆ ಕಾರಣ’ ಎಂದೂ ಪತ್ರದಲ್ಲಿ ಬರೆದು ಸಹಿ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಲೋಕ್‌ ಕುಮಾರ್‌ ಮತ್ತು ತಿಮ್ಮಯ್ಯ ವಿರುದ್ಧ ಸೆಕ್ಷನ್‌ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದು, ಅವರ ಮೊಬೈಲ್‌ಗಳೂ ಸ್ವಿಚ್‌ ಆಫ್‌ ಆಗಿವೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.