ಬೆಂಗಳೂರು: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್‌ನ (ನೈಸ್) ಪೂರ್ಣಗೊಂಡ, ಪೂರ್ಣವಾಗದ ಕಾಮಗಾರಿಗಳು ಮತ್ತು ಈ ಯೋಜನೆಯ ಕಾರ್ಯಕ್ಷಮತೆ ಪರಿಶೀಲನೆಗೆ ಖಾಸಗಿ ಸಲಹಾ ಸಂಸ್ಥೆಯನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ನೈಸ್ ಜೊತೆಗಿನ ಮೂರು ದಶಕಗಳಷ್ಟು ಹಳೆಯದಾದ ಒಪ್ಪಂದವು ಸಂಕೀರ್ಣ ಮತ್ತು ವಿವಾದಗಳಲ್ಲಿ ಸಿಲುಕಿರುವ ಕಾರಣ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ.
ಸಚಿವ ಸಂಪುಟದ ಉಪಸಮಿತಿಯ ಶಿಫಾರಸಿನ ಮೇರೆಗೆ ರಾಜ್ಯ ಸಚಿವ ಸಂಪುಟವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಸಲಹಾ ಸಂಸ್ಥೆಯು ಭೂಸ್ವಾಧೀನ ವಿವಾದ, ಪರಿಸರ ಕಾಳಜಿ, ರಾಜಕೀಯ ವಿವಾದ, ಕಾನೂನು ಮತ್ತು ನಿಯಂತ್ರಣ ಸಮಸ್ಯೆಗಳು ಸೇರಿದಂತೆ ಸಂಕೀರ್ಣ ಸವಾಲುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ಸಂಬಂಧ ಸಲಹೆಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕೆಲಸಕ್ಕಾಗಿ ಇತ್ತೀಚೆಗೆ ಟೆಂಡರ್ ಕರೆಯಲಾಗಿದೆ.
ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕಾರ್ಯಸಾಧ್ಯತೆ, 41 ಕಿ.ಮೀ. ಪೆರಿಫೆರಲ್ ರಸ್ತೆ ಮತ್ತು 9.8 ಕಿ.ಮೀ. ಲಿಂಕ್ ರಸ್ತೆಯಲ್ಲಿ ಟೋಲ್ ಸಂಗ್ರಹದಿಂದ ಬರುವ ಆದಾಯವನ್ನು ಮೌಲ್ಯಮಾಪನ ಮಾಡುವುದು. ಯೋಜನೆಗಾಗಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಖಾಲಿ ಜಮೀನಿನ ಮೌಲ್ಯವನ್ನು ಪರಿಶೀಲಿಸುವುದು ಸಹಿತ ವಿವಿಧ ಅಂಶಗಳು ಇದರ ಕಾರ್ಯವ್ಯಾಪ್ತಿಯಲ್ಲಿ ಬರಲಿವೆ. ಕೆಲಸ ಪೂರ್ಣಗೊಳಿಸಲು ಖಾಸಗಿ ಸಲಹಾ ಸಂಸ್ಥೆಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ.
1995ರ ಒಪ್ಪಂದದ ಮೂಲ ಚೌಕಟ್ಟನ್ನು ಉಲ್ಲಂಘಿಸಿದ್ದಕ್ಕಾಗಿ ನೈಸ್ ಯೋಜನೆಯು ವಿವಾದಕ್ಕೆ ಸಿಲುಕಿತ್ತು. ಮೂಲ ಒಪ್ಪಂದದ ಪ್ರಕಾರ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಐದು ಪಟ್ಟಣಗಳ ಅಭಿವೃದ್ಧಿ ಮಾಡುವುದು ಸಹ ಒಳಗೊಂಡಿದೆ.
ಈ ಹಿಂದೆ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಯು ಹಲವು ಅಕ್ರಮಗಳನ್ನು ಬಹಿರಂಗಪಡಿಸಿತ್ತು. ಅಲ್ಲದೆ ನೈಸ್ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಿತ್ತು. ಅವಶ್ಯಕತೆಗಿಂತ ಅಧಿಕವಾಗಿ 13,000 ಎಕರೆ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿದೆ ಎಂದು ಸಮಿತಿ ತಿಳಿಸಿತ್ತು. ಇದಕ್ಕೆ ಸಂಬಂಧಿಸಿದ 374ಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.