ಬೆಂಗಳೂರು: ಪ್ರಾಥಮಿಕ ಪೂರ್ವ ತರಗತಿಗಳಿಂದ ದ್ವಿತೀಯ ಪಿಯುವರೆಗಿನ ಎಲ್ಲ ವಿದ್ಯಾರ್ಥಿಗಳಿಗೂ ತರಗತಿಗಳನ್ನು ಆರಂಭಿಸಬೇಕು ಎಂದು ಶಿಕ್ಷಣ ತಜ್ಞರು ಹಾಗೂ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
‘ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸದಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಅವೈಜ್ಞಾನಿಕ. ಮಕ್ಕಳ ಭವಿಷ್ಯಕ್ಕೆ ಮಾರಕ’ ಎಂದು ತಜ್ಞರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
‘ಪ್ರಾಥಮಿಕ ಶಾಲೆಗಳನ್ನು ತೆರೆಯಬಾರದು ಎಂದು ಹೇಳುವ ಮೂಲಕ ಸರ್ಕಾರ ಮಕ್ಕಳ ಶಿಕ್ಷಣದ ಹಕ್ಕಿನ ಜೊತೆಗೆ ಆಹಾರ ಮತ್ತು ಇತರ ಸಾಂವಿಧಾನಿಕ ಹಕ್ಕುಗಳನ್ನೂ ಕಸಿದುಕೊಳ್ಳುತ್ತಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮತ್ತು ಪೋಷಕರ ಬೇಡಿಕೆ ಕಲಿಕೆ ಮಾತ್ರ ಲ್ಲ. ಮಧ್ಯಾಹ್ನದ ಬಿಸಿಯೂಟ, ಆರೋಗ್ಯ, ರೋಗ ನಿರೋಧಕ ಪೂರಕ ಮಾತ್ರೆಗಳು ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಸಿಗುತ್ತಿದ್ದ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಇತ್ಯಾದಿಗಳನ್ನು ಪಡೆಯವುದೂ ಅವರ ಬೇಡಿಕೆಗಳು’ ಎಂದು ಅಭಿವದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳಿದ್ದಾರೆ.
‘ಪರಿಷ್ಕೃತ ವಿದ್ಯಾಗಮ ಯೋಜನೆಯ ಆದೇಶದಲ್ಲಿಯೂ ಸಾಕಷ್ಟು ಗೊಂದಲ ಮತ್ತು ಅಸ್ಪಷ್ಟತೆ ಇದೆ. ಇದನ್ನೂ ಮಾರ್ಪಾಡು ಮಾಡಬೇಕು. ಶಾಲಾ ಹಂತದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪಂಚಾಯಿತಿ, ಪುರಸಭೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಇದು ಸರಿಯಾದ ಕ್ರಮವಲ್ಲ. ಅವರ ಬಳಿ ಯಾವುದೇ ನಿಗದಿತ ಅನುದಾನ ಇರುವುದಿಲ್ಲ. ಅಲ್ಲದೆ, ಗ್ರಾಮ ಪಂಚಾಯಿತಿಗಳು ಈಗ ಚುನಾವಣೆ ತರಾತುರಿಯಲ್ಲಿ ನಿರತವಾಗಿವೆ’ ಎಂದರು.
‘ವಿದ್ಯಗಮದ ಉದ್ದೇಶಕ್ಕಾಗಿ ಸರ್ಕಾರವು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕ್ರಮವಾಗಿ ₹50 ಸಾವಿರ, ₹1 ಲಕ್ಷ, ₹1.50 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.