ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಪರಿವರ್ತನೆಯಾಗಲು ಖಾಸಗಿ ಸಂಸ್ಥೆಯಿಂದ ಸಲಹೆ ಮತ್ತು ಯೋಜನಾತ್ಮಕ ಬೆಂಬಲ ಪಡೆಯಲು ನಿರ್ಧರಿಸಿದೆ.
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ ಮೇ 15ರಿಂದ ಜಾರಿಯಾಗಿದ್ದು, ಬಿಬಿಎಂಪಿ ಪ್ರದೇಶವನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ ಎಂದು ಘೋಷಿಸಲಾಗಿದೆ. ಆದರೂ ಬಿಬಿಎಂಪಿ ಕಾಯ್ದೆ–2020ರ ಪ್ರಕಾರ ಬಿಬಿಎಂಪಿ ಕಾರ್ಯನಿರ್ವಹಿಸುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ, ಅದರ ಮೂಲಕವೇ ಆಡಳಿತ ನಡೆಸಲು ಇದೀಗ ಸಿದ್ಧತೆ ಆರಂಭವಾಗಿದೆ.
ಜಿಬಿಎ ಆಡಳಿತವನ್ನು ಅನುಷ್ಠಾನಗೊಳಿಸಲು ಪ್ರತಿಷ್ಠಿತ ಸಲಹಾ ಸಂಸ್ಥೆಗಳ ಮೂಲಕ ‘ಯೋಜನಾತ್ಮಕ ಸಲಹೆಗಳನ್ನು’ ಪಡೆಯಲು ನಿರ್ಧರಿಸಲಾಗಿದೆ. ಹೀಗಾಗಿ, ಬಿಬಿಎಂಪಿ ಮುಖ್ಯ ಆಯುಕ್ತರು ಮೂಲಸೌಕರ್ಯ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಮೂಲಕ ಟೆಂಡರ್ ಆಹ್ವಾನಿಸಿದ್ದಾರೆ. ಜುಲೈ 17ರಂದು ಬಿಡ್‌ಗಳನ್ನು ತೆರೆಯಲಾಗುತ್ತದೆ.
ಬೆಂಗಳೂರು ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ಮೂಲಸೌಕರ್ಯ ಹಾಗೂ ಸೇವೆಗಳನ್ನು ಒದಗಿಸುವ ಬೇಡಿಕೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ನಗರದ ವಿಸ್ತರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಗುರಿ ಹೊಂದಿದ್ದು, ಬಿಬಿಎಂಪಿಯು ಜಿಬಿಎಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕಾಗಿ, ಸಾಂಸ್ಥಿಕ ಚೌಕಟ್ಟು, ಸದೃಢ ಆಡಳಿತ ಹಾಗೂ ನಗರ ಪಾಲಿಕೆಗಳು ಮತ್ತು ಇತರೆ ಇಲಾಖೆಗಳ ನಡುವೆ ಸಮನ್ವಯ– ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ರಚಿಸಿಕೊಡಬೇಕೆಂದು ಖಾಸಗಿ ಸಂಸ್ಥೆಗಳನ್ನು ಕೇಳಲಾಗಿದೆ.
'ಬಿಬಿಎಂಪಿಯನ್ನು ಜಿಬಿಎಗೆ ಪರಿವರ್ತಿಸಲು ಮತ್ತು ಬಿ-ಸ್ಮೈಲ್ ಕಾರ್ಯಾಚರಣೆಯ ಕಾರ್ಯತಂತ್ರಕ್ಕೆ ಬೆಂಬಲ’ ಶೀರ್ಷಿಕೆಯಡಿ ಯೋಜನಾತ್ಮಕ ವರದಿಯನ್ನು ಖಾಸಗಿಯವರಿಂದ ಆಹ್ವಾನಿಸಲಾಗಿದೆ. ಜಿಬಿಎ ಆಡಳಿತ ರಚನೆಗಾಗಿ ಸಾಂಸ್ಥಿಕ ಚೌಕಟ್ಟು, ಹಣಕಾಸು ನಿರ್ವಹಣಾ ಕಾರ್ಯತಂತ್ರ ವಿನ್ಯಾಸ, ಸಂಸ್ಥೆಗಳ ಜವಾಬ್ದಾರಿಯಲ್ಲಿ ಸ್ಪಷ್ಟತೆ, ಸಂಪನ್ಮೂಲ ಹಂಚಿಕೆ ಮತ್ತು ಹೊಸ ನಗರ ಪಾಲಿಕೆಗಳು, ಬಿಡಿಎ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಹಾಗೂ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ನಡುವಿನ ಸಮನ್ವಯ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಬೇಕಿದೆ. ಅಂತರ ಸಂಸ್ಥೆಗಳ ಸಮನ್ವಯದ ಜೊತೆಗೆ ಸಮಾನ ಆದಾಯ, ವೆಚ್ಚ ಹಂಚಿಕೆ, ಹಣಕಾಸು ವಿನಿಯೋಗ, ಆಡಳಿತಾತ್ಮಕ ಚೌಕಟ್ಟುಗಳನ್ನು ನಿರ್ಧರಿಸುವ ಕಾರ್ಯತಂತ್ರಗಳನ್ನೂ ರೂಪಿಸಬೇಕಾಗಿದೆ.
ಬಿಬಿಎಂಪಿಯಿಂದ ಜಿಬಿಎಗೆ ಆಡಳಿತ ಪರಿವರ್ತನೆಯಾಗುವ ಪ್ರಕ್ರಿಯೆ ಸುಗಮವಾಗಿರಲು ಸಮಗ್ರ ಕಾರ್ಯವಿಧಾನ ನೀಡಲು ಕೇಳಲಾಗಿದೆ. ನಗರ ಪಾಲಿಕೆಗಳ ನಡುವೆ ಸ್ವತ್ತುಗಳ ಮರುಹಂಚಿಕೆಗೆ 100 ದಿನಗಳ ಕ್ರಿಯಾಯೋಜನೆ ರೂಪಿಸಬೇಕಾಗಿದೆ. ಆಡಳಿತ ರಚನೆ ಮತ್ತು ಕಾರ್ಯಾಚರಣೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯತಂತ್ರಗಳನ್ನು ಒದಗಿಸಬೇಕಾಗಿದೆ.
‘ಗ್ರೇಟರ್ ಬೆಂಗಳೂರಿಗೆ’ ದೃಢವಾದ, ಜವಾಬ್ದಾರಿಯುತವಾದ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಆಡಳಿತ ಮತ್ತು ಯೋಜನೆಯನ್ನು ವಿತರಿಸುವ ವ್ಯವಸ್ಥೆಯನ್ನು ಒದಗಿಸಲು ಖಾಸಗಿ ಸಂಸ್ಥೆಯ ಸಲಹೆಯನ್ನು ತೆಗೆದುಕೊಳ್ಳಲಾಗುತ್ತದೆ. ಯೋಜನಾತ್ಮಕ ಸಲಹೆಗಳನ್ನು ಪಡೆಯಲು ಖಾಸಗಿ ಸಂಸ್ಥೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಳ್ಳಲಿದೆ. ಬಿ–ಸ್ಮೈಲ್‌ನ ಮೊದಲ ಮಂಡಳಿ ಸಭೆಯಲ್ಲಿ ನಿರ್ದೇಶಕರ ಸಮ್ಮತಿ ಪಡೆದು ಒಪ್ಪಂದವನ್ನು ಬಿ–ಸ್ಮೈಲ್‌ಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.