ADVERTISEMENT

ಆರ್‌ಎಸ್‌ಎಸ್‌ ನೋಂದಣಿ ನಾನೇ ಮಾಡಿಸ್ತೀನಿ: ಸಚಿವ ಪ್ರಿಯಾಂಕ್‌ ಖರ್ಗೆ

'ಸಂವಿಧಾನ, ಕಾನೂನು ಪ್ರಕಾರವೇ ನಡೆಯಬೇಕು'

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 16:19 IST
Last Updated 15 ಫೆಬ್ರುವರಿ 2026, 16:19 IST
ಅಹರ್ನಿಶಿ ಪ್ರಕಾಶನ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್, ಮುನೀರ್ ಕಾಟಿಪಳ್ಳ, ದಿನೇಶ್ ಅಮಿನ್‌ ಮಟ್ಟು, ಪ್ರಿಯಾಂಕ್ ಖರ್ಗೆ, ಇರ್ಷಾದ್ ಉಪ್ಪಿನಂಗಡಿ ಹಾಗೂ ಅಕ್ಷತಾ ಹುಂಚದಕಟ್ಟೆ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ
ಅಹರ್ನಿಶಿ ಪ್ರಕಾಶನ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್, ಮುನೀರ್ ಕಾಟಿಪಳ್ಳ, ದಿನೇಶ್ ಅಮಿನ್‌ ಮಟ್ಟು, ಪ್ರಿಯಾಂಕ್ ಖರ್ಗೆ, ಇರ್ಷಾದ್ ಉಪ್ಪಿನಂಗಡಿ ಹಾಗೂ ಅಕ್ಷತಾ ಹುಂಚದಕಟ್ಟೆ ಭಾಗವಹಿಸಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆರ್‌ಎಸ್‌ಎಸ್‌ ಅನ್ನು ನೋಂದಣಿ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ. ಆದರೆ, ಇವತ್ತಲ್ಲ ನಾಳೆ ನೋಂದಣಿ ಆಗುತ್ತದೆ,  ಆಗಲೇಬೇಕು. ನಾನೇ ಮಾಡಿಸ್ತೀನಿ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಭಾನುವಾರ ಇಲ್ಲಿ ನಡೆದ ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ ಕಣ್ಣೀರು’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರ್‌ಎಸ್‌ಎಸ್‌ ಸಂಸ್ಥೆಯಲ್ಲ, ಜನರ ಸಂಘಟನೆಯಂತೆ. ಬೆಂಗಳೂರು ಕ್ಲಬ್‌ ಕೂಡ ವೈಯಕ್ತಿಕ ಸಂಘಟನೆ. ಅವರು ಕಾನೂನು ಪ್ರಕಾರ ನೋಂದಣಿ ಮಾಡಿ ತೆರಿಗೆ ಪಾವತಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ನೂರು ವರ್ಷ ಅವರು ನೋಂದಣಿ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಮತ್ತೆ ನೂರು ವರ್ಷ ಬಿಡಬೇಕಾ? ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. ಇನ್ನಾದರೂ ಸಂವಿಧಾನ ಬದ್ಧವಾಗಿ ನೋಂದಣಿ ಮಾಡಿಕೊಳ್ಳಬೇಕು. ರಾಜಕೀಯ ಇಚ್ಛಾಶಕ್ತಿ ಇದ್ದರೆ ಮಾಡಬಹುದು. ಸಂವಿಧಾನ, ಕಾನೂನು ಪ್ರಕಾರವೇ ಆ ಕೆಲಸ ಆಗಬೇಕು’ ಎಂದು ತಿಳಿಸಿದರು.

‘ಆರ್‌ಎಸ್‌ಎಸ್‌ ದೇಣಿಗೆ ತೆಗೆದುಕೊಳ್ಳುವುದಿಲ್ಲವಂತೆ. ಗುರುದಕ್ಷಿಣೆಯಷ್ಟೇ ತೆಗೆದುಕೊಳ್ಳುವುದಂತೆ. ಹಾಗಾದರೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಉತ್ತರವಿಲ್ಲ. ಗುರು ಯಾರು ಎಂದು ನೋಡಿದರೆ ಅವರ ಧ್ವಜವೇ ಗುರುವಂತೆ. ಧ್ವಜಕ್ಕೆ ಗುರುವಂದನೆ ಸಲ್ಲಿಸುವುದಂತೆ. ಅಮೆರಿಕ ಸೆರಿದಂತೆ ವಿವಿಧ ದೇಶಗಳಲ್ಲಿ 2,500 ಕ್ಕೂ ಅಧಿಕ ಸಂಘ ಸಂಸ್ಥೆಗಳೊಂದಿಗೆ ಇವರಿಗೆ ಸಂಪರ್ಕ ಜಾಲವಿದೆ. ನಾವು ತೆರಿಗೆ ಪಾವತಿಸಬೇಕು. ಇವರಿಗೆ ತೆರಿಗೆ ಇಲ್ಲ ಎನ್ನುವುದು ಕಾನೂನಿಗೆ ವಿರುದ್ಧವಾದುದು’ ಎಂದು ವಿಶ್ಲೇಷಿಸಿದರು.

‘ಸ್ವಾತಂತ್ರ್ಯ ಬಂದ ಬಳಿಕವೂ 52 ವರ್ಷ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಭಾರತದ ಧ್ವಜ ಹಾರಿಸದವರು ನಮಗೆ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ. ಯಾವುದೇ ವಿಚಾರದಲ್ಲಿ ಭಿನ್ನತೆ ಬಂದ ಕೂಡಲೇ ಅವರು ಧರ್ಮದ್ರೋಹಿ ಮಾತ್ರವಲ್ಲ, ದೇಶದ್ರೋಹಿ ಎಂದು ಬಿಂಬಿಸುತ್ತಿದ್ದಾರೆ. ಕೋಮುವಾದ ಹೋಗದೇ, ಸಂವಿಧಾನವನ್ನು ರಕ್ಷಣೆ ಮಾಡದೇ ಪ್ರಬುದ್ಧ ಸಮಾಜ, ಸಮೃದ್ಧ ಭಾರತವನ್ನು ಕಟ್ಟಲು ಸಾಧ್ಯವಿಲ್ಲ’ ಎಂದರು.

ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಮಾತನಾಡಿ, ‘ಕೋಮುಶಕ್ತಿಗಳನ್ನು ಸೋಲಿಸಲು ಚುನಾವಣಾ ರಾಜಕಾರಣ ಸಾಕಾಗುವುದಿಲ್ಲ. ಸಾಂಸ್ಕೃತಿಕ ರಾಜಕಾರಣವೂ ಅಗತ್ಯ. ಸಾಂಸ್ಕೃತಿಕ ರಾಜಕಾರಣದಲ್ಲಿ ನಾವು ಹಿಂದೆ ಬಿದ್ದಿರುವುದೇ ಕೋಮುಶಕ್ತಿ ಬಲಗೊಳ್ಳಲು ಕಾರಣ’ ಎಂದರು.

‘ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಒಂದೇ ಅಲ್ಲ. ಹಿಂದೂ ಕೋಮುದಾದವನ್ನು ಹಿಮ್ಮೆಟ್ಟಿಸಲು ಹಿಂದೂ ಧರ್ಮವನ್ನು ಸುಧಾರಣೆ ಮಾಡುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಬೇಕು. ಹಿಜಾಬ್, ತಲಾಕ್‌, ಹಲಾಲ್‌, ಬುರ್ಖಾ ಮುಂತಾದ ವಿಷಯ ಬಂದಾಗ ಮುಸ್ಲಿಮರು ಚಿಪ್ಪಿನೊಳಗೆ ಸೇರಿಕೊಳ್ಳುತ್ತಾರೆ. ಅದೇ ಧರ್ಮದ ಒಳಗಿನಿಂದ ಸುಧಾರಣೆಯ ಧ್ವನಿ ಬರಬೇಕು’ ಎಂದು ಹೇಳಿದರು.

ಮುಸ್ಲಿಮರಲ್ಲಿ ಮೂಲಭೂತವಾದಿಗಳು ಮಾತ್ರವಲ್ಲ, ಹಿಂದೂ ಕೋಮುವಾದಿಗಳಂತೆ ಮುಸ್ಲಿಮರಲ್ಲಿಯೂ ಕೋಮುವಾದಿಗಳು ಹುಟ್ಟಿಕೊಂಡಿದ್ದಾರೆ ಎಂದು ಹೋರಾಟಗಾರ ಮುನೀರ್‌ ಕಾಟಿಪಳ್ಳ ತಿಳಿಸಿದರು.

ನಟ ಕಿಶೋರ್‌ ಕುಮಾರ್‌, ಕೃತಿಕಾರ ಇರ್ಷಾದ್ ಉಪ್ಪಿನಂಗಡಿ, ಅಹರ್ನಿಸಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿದ್ದರು.

‘ಆರ್‌ಎಸ್‌ಎಸ್‌ ‘ದೆವ್ವ’ದೊಂದಿಗೆ ಜಗಳವಾಡಿ’
‘ಆರ್‌ಎಸ್‌ಎಸ್‌ ಇಲ್ಲಾಂದ್ರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ. ನಾವು ದೆವ್ವದ ನೆರಳಿನೊಂದಿಗೆ ಜಗಳವಾಡುತ್ತಿದ್ದೇವೆ. ಅದರಿಂದ ಪ್ರಯೋಜನವೇನೂ ಇಲ್ಲ. ಆರ್‌ಎಸ್‌ಎಸ್‌ ದೆವ್ವವಾದರೆ ಬಿಜೆಪಿ ದೆವ್ವದ ನೆರಳು. ದೆವ್ವದೊಂದಿಗೆ ನೇರವಾಗಿ ಜಗಳವಾಡಿದರೆ ನಮ್ಮ ದೇಶ ಸುಧಾರಣೆ ಆಗಲಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಜೆಡಿಎಸ್‌ನಿಂದ ಎಸ್‌ ತೆಗೆಯಬೇಕು. ಯಾಕೆಂದರೆ ಅಲ್ಲಿ ಜಾತ್ಯತೀತ ತತ್ವ ಉಳಿದಿಲ್ಲ. ಬರೀ ಜೆಡಿ ಎಂದು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.