ADVERTISEMENT

ಆರು ಪ್ರಾದೇಶಿಕ ಕೇಂದ್ರ ತೆರೆಯಲು ಚಿಂತನೆ: ಜಾರ್ಜ್‌

ಪ್ರೊ.ಯು.ಆರ್.ರಾವ್ ವಿಜ್ಞಾನ ಭವನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2018, 20:37 IST
Last Updated 10 ಅಕ್ಟೋಬರ್ 2018, 20:37 IST
ಸಚಿವ ಕೆ.ಜೆ.ಜಾರ್ಜ್‌ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಡಾ.ಎಸ್.ಕೆ.ಶಿವಕುಮಾರ್ ಇದ್ದಾರೆ
ಸಚಿವ ಕೆ.ಜೆ.ಜಾರ್ಜ್‌ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಡಾ.ಎಸ್.ಕೆ.ಶಿವಕುಮಾರ್ ಇದ್ದಾರೆ   

ಬೆಂಗಳೂರು: ‘ಮುಂದಿನ ವರ್ಷಾಂತ್ಯದ ವೇಳೆಗೆ ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಆರು ಉಪ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ’ ಎಂದು ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಜಿಕೆವಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ’ಪ್ರೊ. ಯು.ಆರ್.ರಾವ್ ವಿಜ್ಞಾನ ಭವನ’ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ನಿಟ್ಟಿನಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ರೂಪುರೇಷೆ ಸಿದ್ಧಪಡಿಸಿದೆ’ ಎಂದರು.

ADVERTISEMENT

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆ ಅಂಗಳದಲ್ಲಿ ತಾರಾಲಯ ಸ್ಥಾಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಬಾಹ್ಯಾಕಾಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ದಿಸೆಯಲ್ಲಿ ರಾಜ್ಯದ ಪ್ರತಿ 5 ಜಿಲ್ಲೆಗೊಂದರಂತೆ ತಾರಾಲಯ ನಿರ್ಮಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಕರ್ನಾಟಕವು ವಿಜ್ಞಾನ ಮತ್ತು ತಂತ್ರಜ್ಞಾನದ ರಾಜಧಾನಿ ಎಂದು ಹೆಸರುವಾಸಿಯಾಗಿದೆ’ ಎಂದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ನಮ್ಮಲ್ಲಿ ಆವಿಷ್ಕಾರಕ್ಕೆ ಅಗತ್ಯವಿರುವ ಸಾಧನಗಳ ಕೊರತೆ ಇಲ್ಲ. ಅದಕ್ಕೆ ಪೂರಕವಾದ ಅವಕಾಶ ಮತ್ತು ಸನ್ನಿವೇಶಗಳನ್ನು ಸರ್ಕಾರ ಒದಗಿಸಿಕೊಡಬೇಕು’ ಎಂದರು.

ಮೇಯರ್ ಗಂಗಾಂಬಿಕೆ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಡಾ.ಎಸ್.ಕೆ.ಶಿವಕುಮಾರ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದ್ರೇಶ್, ಬಿಬಿಎಂಪಿ ಸದಸ್ಯರಾದ
ಎಂ.ಸತೀಶ್, ನೇತ್ರಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

ವಿಜ್ಞಾನ ಭವನದಲ್ಲಿ ಏನಿದೆ?

₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಜ್ಞಾನ ಭವನದಲ್ಲಿ ಸೆಮಿನಾರ್ ಹಾಲ್ ಇದೆ. ಜೊತೆಗೆ 30 ರಿಂದ 40 ಜನರಿಗೆ ವಸತಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

‘ತರಬೇತಿ ಕೇಂದ್ರದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಭವನದಲ್ಲಿ ಎಂಎಸ್ಸಿ, ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ವಿಧಾನಗಳು, ಉದ್ಯಮಶೀಲತೆಯ ಅಭಿವೃದ್ಧಿ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ಮಾಹಿತಿ-ಜೈವಿಕ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ (ತಾಂತ್ರಿಕ) ಡಾ.ಎಚ್.ಹೊನ್ನೇಗೌಡ ತಿಳಿಸಿದರು.

‘ಹೊರಗಿನಿಂದ ಉತ್ತಮ ಸಂಶೋಧಕರನ್ನು ಆಹ್ವಾನಿಸಿ, ಇಲ್ಲಿತರಬೇತಿ ನೀಡಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಬೆಂಗಳೂರಿನಲ್ಲಿರುವ ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ರಾಜ್ಯದ ಸ್ನಾತಕೋತ್ತರ ಪದವೀಧರರನ್ನು ಆಹ್ವಾನಿಸಿ, ವಿಜ್ಞಾನ-ತಂತ್ರಜ್ಞಾನ, ಭೌತಶಾಸ್ತ್ರ-ರಸಾಯನಶಾಸ್ತ್ರ ವಿಭಾಗಗಳಲ್ಲಿ ಆಗಿರುವ ಅಭಿವೃದ್ಧಿ, ಯಾವರೀತಿ ಸಂಶೋಧನೆಗಳನ್ನು ಕೈಗೊಳ್ಳಬಹುದು?ಮತ್ತಿತರ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ಭವನ ಸಹಕಾರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.