ADVERTISEMENT

ಶೋಕಾಚರಣೆ ನಡುವೆಯೂ ಉದ್ಘಾಟನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 21:15 IST
Last Updated 1 ಸೆಪ್ಟೆಂಬರ್ 2020, 21:15 IST
ಪಂಡಿತ ದೀನದಯಾಳ್‌ ಉಪಾಧ್ಯಾಯ ಕಬಡ್ಡಿ ಕ್ರೀಡಾಂಗಣ, ಕನಕಗಿರಿ ಉದ್ಯಾನ ಹಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿರುವ ಹೊರಾಂಗಣ ಜಾಹೀರಾತು
ಪಂಡಿತ ದೀನದಯಾಳ್‌ ಉಪಾಧ್ಯಾಯ ಕಬಡ್ಡಿ ಕ್ರೀಡಾಂಗಣ, ಕನಕಗಿರಿ ಉದ್ಯಾನ ಹಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿರುವ ಹೊರಾಂಗಣ ಜಾಹೀರಾತು   

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನಿಧನದ ಸಲುವಾಗಿ ರಾಷ್ಟ್ರದಾದ್ಯಂತ ಒಂದು ವಾರ ಶೋಕಾಚರಣೆ ನಡೆಸಲಾಗುತ್ತಿದೆ. ಈ ಸಲುವಾಗಿ ಬಿಬಿಎಂಪಿ ಕೌನ್ಸಿಲ್‌ ಸಭೆ ಹಾಗೂ ಕೆಂಪೇಗೌಡ ಜಯಂತಿಯನ್ನು ಮುಂದೂಡಿದೆ. ಆದರೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮಾರೇನಹಳ್ಳಿ ವಾರ್ಡ್‌ನಲ್ಲಿ ಬುಧವಾರ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಮಾತ್ರ ರದ್ದಾಗಿಲ್ಲ.

ಮಾರೇನಹಳ್ಳಿ ವಾರ್ಡ್‌ನಲ್ಲಿ ಗ್ರಂಥಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಪ್ರಯಾಣಿಕರ ತಂಗುದಾಣ, ಜನೌಷಧ ಕೇಂದ್ರ ಕೆ.ಜಿಎಸ್‌ ಕಟ್ಟಡ, ಶ್ಯಾಂಪ್ರಸಾದ್‌ ಮುಖರ್ಜಿ ಕ್ರೀಡಾಸಂಕೀರ್ಣ ಹಾಗೂ ಉದ್ಯಾನ ಮತ್ತು ಅನಂತ ಕುಮಾರ್‌ ಕ್ರೀಡಾ ಸಂಕೀರ್ಣಗಳ ಉದ್ಘಾಟನೆಯನ್ನು ಇದೇ 2ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸುವರು ಹಾಗೂ ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆ ವಹಿಸುವರು ಎಂದು ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು.

ಪ್ರಣವ್‌ ಮುಖರ್ಜಿ ಅವರ ನಿಧನದ ಶೋಕಾಚರಣೆ ನಡುವೆಯೂ ಈ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ವಾರ್ತಾ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ವಿ.ಸೋಮಣ್ಣ ಅವರೇ ಇವುಗಳ ಉದ್ಘಾಟನೆ ನೆರವೇರಿಸಲಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್‌, ‘ಯಾವುದೇ ಅದ್ಧೂರಿ ಕಾರ್ಯಕ್ರಮ ನಡೆಸುವುದಕ್ಕೆ ನಾವು ಅನುಮತಿ ನೀಡಿಲ್ಲ. ಬೆರಳೆಣಿಕೆ ಮಂದಿಯಷ್ಟೇ ಸೇರಿ ಕೇವಲ ರಿಬ್ಬನ್ ಕತ್ತರಿಸಲು ಅನುಮತಿ ನೀಡಿದ್ದೇವೆ’ ಎಂದರು.

ಹೊರಾಂಗಣ ಜಾಹೀರಾತು ನಿಷೇಧ ಉಲ್ಲಂಘನೆ?

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಆದರೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಂಡಿತ ದೀನದಯಾಳ್‌ ಉಪಾಧ್ಯಾಯ ಕಬಡ್ಡಿ ಕ್ರೀಡಾಂಗಣ, ಕನಕಗಿರಿ ಉದ್ಯಾನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಾರಿ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಈ ಕಾರ್ಯಕ್ರಮವು ಇದೇ 4ರಂದು ನಡೆಯಲಿದೆ.

‘ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸಂಬಂಧಿಸಿ ಹೊರಾಂಗಣ ಜಾಹೀರಾತುಗಳ ಪ್ರದರ್ಶನಕ್ಕೆ ಬಿಬಿಎಂಪಿ ವತಿಯಿಂದ ಅನುಮತಿ ನೀಡಿಲ್ಲ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.