712 ಚದರ ಕಿ.ಮೀ; ಐದೂ ನಗರ ಪಾಲಿಕೆಗಳ ವ್ಯಾಪ್ತಿ | 1.44 ಕೋಟಿ; 2023ರಂತೆ ಜನಸಂಖ್ಯೆ | 20,225; ಪ್ರತಿ ಕಿ.ಮೀಗೆ ಜನಸಾಂದ್ರತೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳಿಂದ ವಾರ್ಷಿಕವಾಗಿ ₹3,427 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲು ಯೋಜಿಸಲಾಗಿದೆ.
ನಗರ ಪಾಲಿಕೆಗಳಿಗೆ ಆಯವ್ಯಯವನ್ನು ನಿಗದಿ ಮಾಡಿ, ಜಿಬಿಎ ಮೊದಲ ಸಭೆಯಲ್ಲಿ ಅದಕ್ಕೆ ಅನುಮೋದನೆಯನ್ನು ನೀಡಿದ್ದು, ಆಸ್ತಿ ತೆರಿಗೆಯ ಗುರಿಯನ್ನು ನೀಡಲಾಗಿದೆ.
ಪ್ರತಿ ನಗರ ಪಾಲಿಕೆಯು ಸ್ವತಂತ್ರ ಹಣಕಾಸು ಲೆಕ್ಕಪತ್ರಗಳನ್ನು ನಿರ್ವಹಿಸಬೇಕು, ಜಿಬಿಎ ಸೂಚಿಸಿದ ವಿಶಾಲ ಚೌಕಟ್ಟನ್ನು ಅನುಸರಿಸುವಾಗ ಸಂಪನ್ಮೂಲಗಳನ್ನು ಸ್ವಾಯತ್ತವಾಗಿ ನಿರ್ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಐದು ನಗರ ಪಾಲಿಕೆಗಳಿಗೆ ₹613.60 ಕೋಟಿಯನ್ನು ಜಿಬಿಎಯಿಂದ ವಿತರಿಸಲಾಗಿದ್ದು, ಆ ಹಣವನ್ನು ತಮ್ಮ ಕಾರ್ಯನಿರ್ವಹಣೆ, ಅಗತ್ಯವಾದ ಸಾಂಸ್ಥಿಕ ರಚನೆ, ಆಡಳಿತಾತ್ಮಕ ಹಾಗೂ ಇತರೆ ವೆಚ್ಚಗಳಿಗೆ ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಅಲ್ಲದೆ, ಐದು ನಗರ ಪಾಲಿಕೆಗಳಿಗೆ 2025ರ ಸೆಪ್ಟೆಂಬರ್‌ನಿಂದ 2026ರ ಮಾರ್ಚ್‌ವರೆಗಿನ ಆಯವ್ಯಯವನ್ನು ಸಿದ್ಧಪಡಿಸಿಕೊಟ್ಟು, ಅದಕ್ಕೆ ಜಿಬಿಎ ಸಭೆಯಲ್ಲಿ ಅನುಮೋದನೆಯನ್ನೂ ನೀಡಲಾಗಿದೆ.
ಕೌನ್ಸಿಲ್, ಸಾಮಾನ್ಯ ಆಡಳಿತ, ಕಂದಾಯ, ನಗರ ಯೋಜನೆ, ಸಾರ್ವಜನಿಕ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ– ಸಾಮಾನ್ಯ, ಸಾರ್ವಜನಿಕ ಆರೋಗ್ಯ– ವೈದ್ಯಕೀಯ, ತೋಟಗಾರಿಕೆ, ನಗರ ಅರಣ್ಯೀಕರಣ, ಸಾರ್ವಜನಿಕ ಶಿಕ್ಷಣ, ಸಮಾಜ ಕಲ್ಯಾಣದ ಬಾಬ್ತಿನಲ್ಲಿ ನಗರ ಪಾಲಿಕೆಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.
ಬಿಬಿಎಂಪಿಯಾಗಿದ್ದಾಗ 2025–26ನೇ ಸಾಲಿಗೆ ₹20,440.33 ಕೋಟಿ ಬಜೆಟ್ ಮಂಡಿಸಲಾಗಿತ್ತು. ಐದು ನಗರ ಪಾಲಿಕೆಗಳಾಗಿ ವಿಭಜನೆಯಾದ ಮೇಲೆ ಇವುಗಳ ಒಟ್ಟಾರೆ ಬಜೆಟ್ ಗಾತ್ರ ₹7,977.77 ಕೋಟಿ ಮಾತ್ರವಾಗಿದೆ. ಬೃಹತ್ ಯೋಜನೆಗಳು ಹಾಗೂ ಅಂತರ್ ನಗರ ಪಾಲಿಕೆಗಳ ಯೋಜನೆಗಳನ್ನು ಜಿಬಿಎ ನಿರ್ವಹಿಸುವುದರಿಂದ ಸರ್ಕಾರದ ₹7 ಸಾವಿರ ಕೋಟಿ ಅನುದಾನ, ಪ್ರಾಧಿಕಾರಕ್ಕೇ ಸಂದಾಯವಾಗಲಿದೆ. ಕೇಂದ್ರ ಸರ್ಕಾರದ ಅನುದಾನ ರಾಜ್ಯ ಸರ್ಕಾರದ ಖಾತೆಗೆ ವರ್ಗಾವಣೆಯಾಗಿದ್ದು, ನಗರ ಪಾಲಿಕೆಗಳು ಪ್ರತ್ಯೇಕ ಖಾತೆ ತೆರೆದು ಬೇಡಿಕೆ ಸಲ್ಲಿಸಿದರೆ, ಸರ್ಕಾರದ ನಿರ್ಣಯದಂತೆ ಜಿಬಿಎ ವಿತರಿಸಲಿದೆ.
ಐದು ನಗರ ಪಾಲಿಕೆಗಳ ಬಜೆಟ್ ಅಂದಾಜು (ಸೆಪ್ಟೆಂಬರ್ 2025ರಿಂದ ಮಾರ್ಚ್ 2025)
ನಗರ ಪಾಲಿಕೆ; ಸ್ವೀಕೃತಿ; ಪಾವತಿ; ಉಳಿಕೆ (₹ ಕೋಟಿಗಳಲ್ಲಿ)
ಕೇಂದ್ರ; 1478.35; 1477.22; 1.14
ಪೂರ್ವ; 1766.00; 1764.42; 1.58
ಪಶ್ಚಿಮ; 1710.58; 1710.34; 0.24
ಉತ್ತರ; ₹1599.58; ₹1598.52; 1.06
ದಕ್ಷಿಣ; 1423.24; 1422.15; 1.09
ಒಟ್ಟು; 7977.77; 7972.66; 5.11
ಬಿಬಿಎಂಪಿ ಬಜೆಟ್ 2025–26 (ಪರಿಷ್ಕೃತ)
₹20440.33 ಕೋಟಿ; ಒಟ್ಟಾರೆ ಸ್ವೀಕೃತಿ
₹20436.77 ಕೋಟಿ; ಒಟ್ಟಾರೆ ವೆಚ್ಚ
ಫೆಬ್ರುವರಿಯಲ್ಲಿ ಚುನಾವಣೆ?
ನಗರ ಪಾಲಿಕೆಗಳ ಚುನಾವಣೆಗೆ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲು ವಾರ್ಡ್ ಮರುವಿಂಗಡಣೆ ಅಂತಿಮಗೊಳಿಸಲು ಸಮಯ ನಿಗದಿ ಮಾಡಿರುವ ಕಾರ್ಯಸೂಚಿಗೆ ಜಿಬಿಎ ಮೊದಲ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಂತೆ 2026ರ ಫೆಬ್ರುವರಿ ಮಧ್ಯಭಾಗದಲ್ಲಿ ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ ಅಂತ್ಯಕ್ಕೆ ಗ್ರೇಟರ್ ಬೆಂಗಳೂರು ಪ್ರದೇಶದಕ್ಕಾಗಿ ಸ್ಥಳೀಯ ಯೋಜನಾ ಪ್ರಾಧಿಕಾರವನ್ನಾಗಿ ಜಿಬಿಎಯನ್ನು ಗುರುತುಪಡಿಸಿ ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ ಆರಂಭದೊಳಗೆ ನಗರ ಪಾಲಿಕೆಗಳ ವಾರ್ಡ್ ಮರು ವಿಂಗಡಣೆ ಅಂತಿಮ ಅಧಿಸೂಚನೆಯಾಗಲಿದೆ. ನವೆಂಬರ್ 30ರಂದು ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ತಯಾರಿಕೆಯನ್ನು ಆರಂಭಿಸುತ್ತದೆ. 2026ರ ಫೆಬ್ರುವರಿ ಮಧ್ಯಭಾಗದಲ್ಲಿ ರಾಜ್ಯ ಚುನಾವಣಾ ಆಯೋಗ ನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದು ಮೊದಲ ಸಭೆಯಲ್ಲಿ ಅನುಮೋದನೆಯಾದ ಜಿಬಿಎ ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.