ADVERTISEMENT

ಆಸ್ತಿ ತೆರಿಗೆ ದುಬಾರಿ ದಂಡಕ್ಕೆ ಕಡಿತ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

₹2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆಗಳಿಗೆ ವೈಟ್ ಟಾಪಿಂಗ್: ಡಿಸಿಎಂ ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 16:22 IST
Last Updated 16 ಜನವರಿ 2024, 16:22 IST
‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ಅಶ್ವತ್ಥನಾರಾಯಣ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ಅಶ್ವತ್ಥನಾರಾಯಣ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಸ್ತಿ ತೆರಿಗೆಗೆ ದುಬಾರಿ ದಂಡವನ್ನು ಕಡಿಮೆ ಮಾಡಲು ಕಾನೂನಿಗೆ ತಿದ್ದುಪಡಿ ಮಾಡಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಆಸ್ತಿ ತೆರಿಗೆ ಪಾವತಿಗೆ ನೋಟಿಸ್‌, ದುಬಾರಿ ದಂಡ ವಿಧಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚಾಗುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು 2020ರಲ್ಲಿ ಜಾರಿಗೆ ಬಂದ ಕಾನೂನಿಗೆ ಕೆಲವು ದಿನಗಳಲ್ಲೇ ತಿದ್ದುಪಡಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳ ನಾಗರಿಕರ ದೂರುಗಳನ್ನು ಆಲಿಸಲು ಮಂಗಳವಾರ ಶೇಷಾದ್ರಿಪುರದಲ್ಲಿ ಆಯೋಜಿಸಿದ್ದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ಎಂದು ನೋಟಿಸ್ ಬಂದಿರುವುದರ ಬಗ್ಗೆ ಗಾಬರಿಯಾಗಬೇಡಿ. ಆಸ್ತಿ ತೆರಿಗೆ ಪಾವತಿ ಬಗ್ಗೆ ಜನರ ಮೇಲೆ ಒತ್ತಡ ಹೇರಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಜನರು ತಮ್ಮ ಆಸ್ತಿಗೆ ತಕ್ಕಂತೆ ತೆರಿಗೆ ಪಾವತಿ ಮಾಡುತ್ತಿಲ್ಲ. ಮೂರು ಅಂತಸ್ತಿನ ಮನೆ ಇದ್ದರೆ ಒಂದು ಅಂತಸ್ತು ಎಂದು ತೋರಿಸಿ ಕಡಿಮೆ ತೆರಿಗೆ ಕಟ್ಟುತ್ತಿದ್ದಾರೆ. ಈ ಕುರಿತು ಸಚಿವ ರಾಮಲಿಂಗಾರೆಡ್ಡಿ ಅವರು ಪತ್ರ ಬರೆದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಅನಧಿಕೃತ ಫ್ಲೆಕ್ಸ್ ವಿರುದ್ಧ ಪ್ರಕರಣ: ‘ನನ್ನ ಮನೆ ಬಳಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಹಬ್ಬ, ಹೊಸವರ್ಷದ ಶುಭಾಶಯಗಳ ಫ್ಲೆಕ್ಸ್ ಹಾಕಲಾಗಿದೆ. ಯಾವುದೇ ಪಕ್ಷದವರಾಗಿರಲಿ, ನನ್ನ ಫೋಟೊ ಹಾಕಿರಲಿ ಅಥವಾ ಬೇರೆಯವರ ಫೋಟೊ ಹಾಕಿರಲಿ ಎಲ್ಲ ಅನಧಿಕೃತ ಫ್ಲೆಕ್ಸ್ ತೆರವು ಮಾಡಿ, ಪ್ರಕರಣ ದಾಖಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಇನ್ನು ಮುಂದೆ ಹೊಸ ಜಾಹೀರಾತು ನೀತಿ ತರಲಾಗುವುದು’ ಎಂದು ಹೇಳಿದರು.

ಅಧಿಕಾರಿ ಅಮಾನತು: ಪಿಂಚಣಿಯ ಬಾಕಿ ಮೊತ್ತ ಬಿಡುಗಡೆಗೆ ₹50 ಸಾವಿರ ಲಂಚ ಕೇಳಿದ್ದ ಬೆಸ್ಕಾಂನ ಕೆಂಗೇರಿ ವಿಭಾಗದ ಲೆಕ್ಕಾಧಿಕಾರಿ ಗಿರೀಶ್ ಅವರನ್ನು ಅಮಾನತು ಮಾಡಲು ಡಿಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸಿ 2007ರಲ್ಲಿ ನಿವೃತ್ತಿ ಹೊಂದಿದ್ದು, 15 ವರ್ಷಗಳಿಂದ ಪಿಂಚಣಿಗಾಗಿ ಅಲೆದು ಸುಸ್ತಾಗಿದ್ದೇನೆ ಎಂದು ಎಸ್.ಎಂ. ಗೋವಿಂದಪ್ಪ ಅವರ ದೂರಿಗೆ ಸ್ಪಂದಿಸಿದರು.

ಚಾಮರಾಜಪೇಟೆ ಭಕ್ಷಿ ಗಾರ್ಡನ್‌ನಲ್ಲಿರುವ ಮಹಾತ್ಮ ಗಾಂಧಿ ಅವರು ಭೇಟಿ ನೀಡಿದ ಸರ್ಕಾರಿ ಶಾಲೆಯನ್ನು ಅಭಿವೃದ್ದಿಪಡಿಸುವಂತೆ ಪ್ರಭಾಕರ್‌ ಮನವಿ ಮಾಡಿದರು. ಜಕ್ಕರಾಯನಕೆರೆ ಆಟದ ಮೈದಾನದಲ್ಲಿ ಜಪ್ತಿ ಮಾಡಿಕೊಂಡಿರುವ  ವಾಹನಗಳನ್ನು ಪೊಲೀಸರು ತುಂಬಿದ್ದು, ಮಕ್ಕಳಿಗೆ ಮೈದಾನವಿಲ್ಲದಂತಾಗಿದೆ ಎಂದು ಶೇಷಾದ್ರಿಪುರದ ಮುರಳಿ ಹೇಳಿದರು.

‘ಕುಂಬಳಗೋಡಿನ ದೇವಕೆರೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಆದರೆ ನಮ್ಮ‌ ಹೆಸರಿಗೆ ನೀಡಿಲ್ಲ’ ಎಂದ ಪ್ರಕಾಶ್‌ ಅವರಿಗೆ, ‘ಜಮೀರ್ ಅವರೇ ಸಚಿವರು, ಅವರನ್ನ ಬಿಡಬೇಡ ಹಿಡ್ಕೊ’ ಎಂದರು.

ತಳ್ಳುವ ಗಾಡಿಗೆ ಮಾತ್ರ ಅವಕಾಶ!

‘ಬೀದಿಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡು ತಳ್ಳುವ ಗಾಡಿಯಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಪಾದಚಾರಿ ಮಾರ್ಗದಲ್ಲಿ ಅಂಗಡಿ ಹಾಕಿಕೊಂಡರೆ ಜನ ಸಾಮಾನ್ಯರು ಎಲ್ಲಿ ಓಡಾಡಬೇಕು? ಪಾದಚಾರಿ ಮಾರ್ಗ ತೆರವು ಮಾಡುವಂತೆ ಹೈಕೋರ್ಟ್‌ನಿಂದ ಆದೇಶ ಕೂಡ ಬಂದಿದೆ. ಆ ಆದೇಶ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಶಿವಕುಮಾರ್‌ ಹೇಳಿದರು. ಶಿವಕುಮಾರ್ ಸಿಎಂ ಆಗಲಿ: ‘ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡುವ ಮೂಲಕ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ವೃದ್ಧರಿಗೆ ಶಾಲಾ ಮಕ್ಕಳ ಓಡಾಟಕ್ಕೆ ಇದ್ದ ತೊಂದರೆ ನಿವಾರಣೆಯಾಗಿದೆ. ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ’ ಎಂದು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾಯಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.