ADVERTISEMENT

ಉಪನಗರಗಳಿಗೆ ಮೆಟ್ರೊ ವಿಸ್ತರಣೆಗೆ ಪ್ರಸ್ತಾವ

ನವೀನ್‌ ಮಿನೇಜಸ್‌
Published 2 ಜನವರಿ 2024, 4:20 IST
Last Updated 2 ಜನವರಿ 2024, 4:20 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಬೆಂಗಳೂರಿಗೆ ಹೊಂದಿಕೊಂಡಿರುವ ಉಪನಗರಗಳಿಗೆ ‘ನಮ್ಮ ಮೆಟ್ರೊ’ ಸಂಪರ್ಕವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದ್ದು, 129 ಕಿ.ಮೀ. ಉದ್ದದ ಈ ಸಂಪರ್ಕಜಾಲದ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ.

ಮೆಟ್ರೊಗೆ ಸರ್ಕಾರ ನೀಡಿದ ಅನುಮೋದಿತ ಸಮಗ್ರ ಚಲನಶೀಲ ಯೋಜನೆಯ (ಕಾಂಪ್ರಹೆನ್ಸಿವ್‌ ಮೊಬಿಲಿಟಿ ಪ್ಲಾನ್‌–ಸಿಎಂಪಿ) ಪ್ರಕಾರ ಉಪನಗರಗಳಿಗೆ ವಿಸ್ತರಿಸುವಂತಿಲ್ಲ. ಆದರೂ ಇಂಥದ್ದೊಂದು ಪ್ರಸ್ತಾವವನ್ನು ಬಿಎಂಆರ್‌ಸಿಎಲ್‌, ಸರ್ಕಾರದ ಮುಂದೆ ಇಟ್ಟಿದೆ. ಈಗಿರುವ ಹಸಿರು ಮತ್ತು ನೇರಳೆ ಮಾರ್ಗಗಳ ಕೊನೇ ನಿಲ್ದಾಣದಿಂದ ವಿಸ್ತರಿಸುವುದು ಮತ್ತು ಅವುಗಳಿಗೆ ಸಂಪರ್ಕಿಸುವ ಅರ್ಧ ವರ್ತುಲ ಮಾರ್ಗ ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ನೇರಳೆ ಮತ್ತು ಹಸಿರು ಮಾರ್ಗಗಳನ್ನು ಬಿಡದಿ (ಮೈಸೂರು ರಸ್ತೆ), ಹಾರೋಹಳ್ಳಿ (ಕನಕಪುರ ರಸ್ತೆ), ಅತ್ತಿಬೆಲೆ (ಹೊಸೂರು ರಸ್ತೆ) ಮತ್ತು ಕುಣಿಗಲ್‌ಗೆ ನಾಲ್ಕು ದಿಕ್ಕುಗಳಲ್ಲಿ ವಿಸ್ತರಿಸುವುದು. ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು ಭಾಗಗಳನ್ನು ಹೊಸ ಅರ್ಧವರ್ತುಲ ಮಾರ್ಗದ ಮೂಲಕ ಸಂಪರ್ಕಿಸುವ ಚಿಂತನೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಯೋಜನೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಬರುತ್ತಿದೆ. ಆದರೂ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲು ರಾಜ್ಯ ಸರ್ಕಾರದಿಂದ ಅನುದಾನ ಕೋರಿದೆ. ವಿವಿಧ ಸಂಘಟನೆಗಳು, ಪ್ರಾತಿನಿಧಿಕ ಸಂಸ್ಥೆಗಳ ಸಲಹೆಯಂತೆ ಈ ಯೋಜನೆಗೆ ಮುಂದಾಗಿರುವುದಾಗಿ ಮೆಟ್ರೊ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬಿಡದಿ ಅಲ್ಲದೇ ಹಾರೋಹಳ್ಳಿ, ಅತ್ತಿಬೆಲೆವರೆಗೆ ಮೆಟ್ರೊ ವಿಸ್ತರಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದರು. ಈ ಮಾರ್ಗಗಳನ್ನು ಒಳಗೊಂಡೇ ಅಧ್ಯಯನ ಮಾಡಲಾಗುವುದು ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಸುರಂಗ ರಸ್ತೆಗಳು ಮತ್ತು ಮೆಟ್ರೊ ಯೋಜನೆಗಳು ಸೇರಿದಂತೆ ಬೆಂಗಳೂರಿನ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಕೇಳಿದ್ದರು. ಅದರಲ್ಲಿ ನಾಲ್ಕು ದಿಕ್ಕುಗಳಲ್ಲಿ ಮೆಟ್ರೊ ವಿಸ್ತರಿಸುವ ಮತ್ತು ಅರೆ ವರ್ತುಲ ಮಾರ್ಗ ನಿರ್ಮಿಸುವ ಯೋಜನೆಯನ್ನೂ ಪ್ರಸ್ತಾಪಿಸಿ ಬೆಂಬಲ ಕೋರಿದ್ದರು.

ತಿರಸ್ಕಾರ ಸಾಧ್ಯತೆ?:

ಸರ್ಕಾರದಿಂದ ಅನುಮೋದಿತ ಸಮಗ್ರ ಚಲನಶೀಲ ಯೋಜನೆಯ ಭಾಗವಾಗಿ ಈ ಯೋಜನೆ ಇಲ್ಲದೇ ಇರುವುದರಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ತಿರಸ್ಕರಿಸುವ ಸಾಧ್ಯತೆಯೂ ಇದೆ.

ನಗರದೊಳಗಿನ ಪ್ರಯಾಣಕ್ಕಾಗಿ ಇರುವ ಮೆಟ್ರೊ ರೈಲುಗಳನ್ನು, ಉಪನಗರಗಳಿಗೆ ವಿಸ್ತರಿಸುವುದು ಕಷ್ಟ ಮತ್ತು ಅಗತ್ಯವಿಲ್ಲದ ಯೋಜನೆ. ಉಪನಗರಗಳನ್ನು ಸಂಪರ್ಕಿಸಲು ರೈಲ್ವೆಯ ಉಪನಗರ ಯೋಜನೆ ಇರುವಾಗ ದುಬಾರಿಯಾಗಿರುವ ಮೆಟ್ರೊ ಬೇಕಾಗಿಲ್ಲ. ದೂರದ ಪ್ರದೇಶದಿಂದ ಮೆಟ್ರೊದಲ್ಲಿ ಎರಡು–ಮೂರು ತಾಸು ಪ್ರಯಾಣ ಮಾಡುವುದು ಕಷ್ಟ ಎಂದು ರೈಲ್ವೆ ಹೋರಾಟಗಾರ ಸಂಜೀವ್‌ ದ್ಯಾಮಣ್ಣನವರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.