
ಬೆಂಗಳೂರು: ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನು(ಕೆಪಿಎಸ್) ಪರಿಚಯಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳ ‘ಮುಚ್ಚುವಿಕೆ’ ಕ್ರಮದ ವಿರುದ್ಧ ಚಳವಳಿ ಸಂಘಟಿಸಬೇಕಿದೆ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಕರೆ ನೀಡಿದರು.
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಬೆಂಗಳೂರು ಜಿಲ್ಲಾ ಮಂಡಳಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
‘ಶಾಲೆಗಳನ್ನು ಮುಚ್ಚುವುದು ಎಂದರೆ ಸಂವಿಧಾನದ ಬಾಗಿಲುಗಳನ್ನು ಮುಚ್ಚಿದಂತೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪರಿಚಯಿಸುವ ಮೊದಲು ರಾಜ್ಯ ಸರ್ಕಾರವು ಪಾಲುದಾರರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ’ ಎಂದು ಆರೋಪಿಸಿದರು.
‘ಕರ್ನಾಟಕ ಪಬ್ಲಿಕ್ ಶಾಲೆಗಳು, ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆಯೇ ಎಂಬುದನ್ನು ನಿರ್ಣಯಿಸಲು ಸಮಗ್ರ ಅಧ್ಯಯನ ನಡೆದಿತ್ತೇ’ ಎಂದು ಪ್ರಶ್ನಿಸಿದರು.
‘ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ಆದರೆ, ಏಳು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಆದೇಶವನ್ನು ಯಾವ ಕಾರಣಕ್ಕೆ ಹೊರಡಿಸಲಾಗಿದೆ’ ಎಂದು ಪ್ರಶ್ನಿಸಿದರು.
‘ಅನುದಾನ ಕಡಿಮೆ ಮಾಡುವುದು, ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ತಂತ್ರವನ್ನು ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.
ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಮಾತನಾಡಿ, ‘ಸರ್ಕಾರಿ ಶಾಲೆಗಳ ಮುಚ್ಚುವಿಕೆಯ ವಿರುದ್ಧ ಶಿಕ್ಷಣ ಸಚಿವರು ವಿದ್ಯಾರ್ಥಿ ಸಂಘಟನೆಗಳ ಜತೆಗೆ ಸಭೆ ನಡೆಸಬೇಕು. ಶಿಕ್ಷಣ ವ್ಯವಸ್ಥೆಯನ್ನು ದುರ್ಬಲ ಮಾಡುತ್ತಿರುವವರ ವಿರುದ್ಧ ಹೋರಾಟ ನಡೆಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.