ADVERTISEMENT

ವೇಶ್ಯಾವಾಟಿಕೆಯ ‘ಸ್ಪಾ’ದಲ್ಲಿ ಥಾಯ್ಲೆಂಡ್ ಮಹಿಳೆಯರು!

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 4:02 IST
Last Updated 14 ಏಪ್ರಿಲ್ 2019, 4:02 IST
   

ಬೆಂಗಳೂರು: ಜಯನಗರದ 5ನೇ ಬ್ಲಾಕ್‌ನಲ್ಲಿರುವ ‘ನೇಚರ್ ಟಚ್ ಫ್ಯಾಮಿಲಿ ಸಲೂನ್ ಆ್ಯಂಡ್ ಥಾಯ್ ಸ್ಪಾ’ಗೆ ಗ್ರಾಹಕರಂತೆ ಹೋದ ಪೊಲೀಸರು, ಥಾಯ್ಲೆಂಡ್‌ ದೇಶದ ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕೇರಳದ ಟಿ.ಕೆ.ಶಹೀಲ್ ಅಹಮದ್ (27) ಎಂಬಾತನನ್ನು ಬಂಧಿಸಿದ್ದಾರೆ.

ಶಹೀಲ್ ಎರಡು ವರ್ಷಗಳಿಂದ ಈ ‘ಸ್ಪಾ’ದಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಅದರ ಮಾಲೀಕರಾದ ಎಂ.ಸವಿತಾ, ಸುಧಾಕರ್ ಶೆಟ್ಟಿ ಹಾಗೂ ಯಶವಂತ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ವೇಶ್ಯಾವಾಟಿಕೆ ಕೂಪದಲ್ಲಿದ್ದ 34 ಹಾಗೂ 40 ವರ್ಷದ ಇಬ್ಬರು ಥಾಯ್ಲೆಂಡ್ ಮಹಿಳೆಯರನ್ನು ವಿಚಾರಣೆ ನಡೆಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಕೆಲಸ ಅರಸಿ ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದೆವು. ಈ ವೇಳೆ ನಮ್ಮನ್ನು ಸಂಪರ್ಕಿಸಿದ ಮಹಿಳೆಯೊಬ್ಬರು, ‘ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ನೀಡುತ್ತೇನೆ. ತಿಂಗಳಿಗೆ ₹10 ಸಾವಿರ ಸಂಬಳದ ಜತೆಗೆ, ಊಟ–ವಸತಿ ವ್ಯವಸ್ಥೆ ಕಲ್ಪಿಸುತ್ತೇನೆ’ ಎಂದರು. ಅವರ ಮಾತು ನಂಬಿ ‘ಸ್ಪಾ’ಗೆ ಹೋದರೆ ವೇಶ್ಯಾವಾಟಿಕೆಗೆ ಬಳಸಿಕೊಂಡರು’ ಎಂದು ಸಂತ್ರಸ್ತೆಯರು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಪಂಚೆ ತೊಟ್ಟ ಪೊಲೀಸ್: ‘‌ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಈ ಹಿಂದೆಯೂ ದೂರುಗಳು ಬಂದಿದ್ದವು. ಕೆಲ ದಿನಗಳಿಂದ ನಮ್ಮ ಸಿಬ್ಬಂದಿ ಮಫ್ತಿಯಲ್ಲಿ ಸ್ಪಾ ಸಮೀಪ ಓಡಾಡಿ ಅಲ್ಲಿನ ಚಟುವಟಿಕೆ ಗಮನಿಸಿದ್ದರು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಹೆಡ್‌ ಕಾನ್‌ಸ್ಟೆಬಲ್ ಎನ್‌.ಆರ್.ಶ್ರೀನಿವಾಸ್ ಅವರಿಗೆ ₹1 ಸಾವಿರ ಕೊಟ್ಟು ಗ್ರಾಹಕನಂತೆ ಸ್ಪಾಗೆ ಕಳುಹಿಸಿದ್ದೆವು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಪಂಚೆ–ಅಂಗಿ ತೊಟ್ಟು ಬಂದ ಶ್ರೀನಿವಾಸ್ ಅವರನ್ನು ಶಕೀಲ್‌ನೇ ಸ್ವಾಗತಿಸಿದ್ದ. ಅವರಿಂದ ₹ 1 ಸಾವಿರ ಪಡೆದು ಥಾಯ್ಲೆಂಡ್‌ನ ಮಹಿಳೆ ಇದ್ದ ಕೋಣೆಗೆ ಕಳುಹಿಸಿದ್ದ. ದಂಧೆ ನಡೆಯುತ್ತಿರುವುದು ಖಚಿತವಾದ ಬಳಿಕ ಅವರು ಇನ್‌ಸ್ಪೆಕ್ಟರ್ ಇ. ಯರ್‍ರಿಸ್ವಾಮಿ ಮೊಬೈಲ್‌ಗೆ ಮಿಸ್ಡ್‌ ಕಾಲ್ ಕೊಟ್ಟು ಸಿಗ್ನಲ್ ನೀಡಿದ್ದರು. ಕೂಡಲೇ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ ವ್ಯವಸ್ಥಾಪಕನನ್ನು ಬಂಧಿಸಿತು’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.