
ನೆಲಮಂಗಲ: ರಾಜ್ಯದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ವತಿಯಿಂದ ಲೋಹಿತ್ ನಗರದಲ್ಲಿ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಪ್ರತಿಭಟನಾ ಸಭೆ ನಡೆಯಿತು.
‘ಸಾರ್ವಜನಿಕ ಶಿಕ್ಷಣವನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುವುದು ಕೇವಲ ರಾಜ್ಯದ ಸಮಸ್ಯೆಯಲ್ಲ, ಇಡೀ ದೇಶದಾದ್ಯಂತ ನಡೆಯುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯ ಇಲ್ಲದಿರುವುದಿಂದ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ಇರುವ ಶಿಕ್ಷಕರನ್ನು ಶೈಕ್ಷಣಿಕೇತರ ಕೆಲಸಗಳಿಗೆ ಅಲೆದಾಡಿಸಲಾಗುತ್ತಿದೆ’ ಎಂದು ಎಐಡಿಎಸ್‌ಒ ಬೆಂಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ದೂರಿದರು.
ಎಐಡಿಎಸ್‌ಒ ಜಿಲ್ಲಾ ಸದಸ್ಯೆ ‘ಪ್ರಕೃತಿ ಸಮಾನ ಶಿಕ್ಷಣದ ಕನಸನ್ನು ನನಸು ಮಾಡಲು ಮತ್ತು ಸಾರ್ವಜನಿಕ ಶಿಕ್ಷಣವನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡಬೇಕಿದೆ’ ಎಂದರು.
ಇದೇ ಸಂದರ್ಭದಲ್ಲಿ ಲೋಹಿತ್ ನಗರ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ರಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.