ADVERTISEMENT

ದುಬಾರಿ ಪ್ರಯಾಣ ದರ: ಬಿಎಸ್‌ವೈ, ಈ ಟಿಕೆಟ್‌ ನಿಮಗಾಗಿ!

ಖಾಸಗಿ ಬಸ್‌ಗಳ ದುಬಾರಿ ಪ್ರಯಾಣ ದರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 2:15 IST
Last Updated 25 ಅಕ್ಟೋಬರ್ 2019, 2:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಪ್ರೀತಿಯ ಯಡಿಯೂರಪ್ಪನವರಿಗೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗುಂಡಬಾಳಕ್ಕೆ ಸ್ವಾಗತ. ಇದು ದೀಪಾವಳಿ ಹಬ್ಬಕ್ಕೆ ನಿಮಗೆ ಆಮಂತ್ರಣ. ದುಬಾರಿ ಬೆಲೆಯ ಖಾಸಗಿ ಬಸ್‌ ಟಿಕೆಟ್‌ ನಿಮಗಾಗಿ..’

ಹಬ್ಬ ಅಥವಾ ರಜಾ ದಿನಗಳಲ್ಲಿ ಯಾವುದೇ ಮಿತಿ ಇಲ್ಲದೆ ಖಾಸಗಿ ಬಸ್‌ ಸಂಸ್ಥೆಗಳು ನಿಗದಿಪಡಿಸುತ್ತಿರುವ ದುಬಾರಿ ಪ್ರಯಾಣ ದರದ ವಿರುದ್ಧ ಪ್ರಯಾಣಿಕರೊಬ್ಬರು ಪ್ರತಿಭಟನೆ ವ್ಯಕ್ತಪಡಿಸಿದ ಪರಿ ಇದು.

ರಾಜೇಶ್‌ ಶೇಟ್‌ ಎಂಬುವವರು ಯಡಿಯೂರಪ್ಪ ಅವರಿಗೆ ಖಾಸಗಿ ಬಸ್‌ ಟಿಕೆಟ್‌ ಕಾಯ್ದಿರಿಸಿದ್ದಾರೆ. ಬೆಂಗಳೂರಿನಿಂದ ಹೊನ್ನಾವರಕ್ಕೆ ಸಾಮಾನ್ಯ ದಿನಗಳಲ್ಲಿ ಟಿಕೆಟ್‌ ದರ ₹450. ಆದರೆ, ಅ. 23ರಂದು ಮುಂಗಡ ಕಾಯ್ದಿರಿಸಿರುವ ಟಿಕೆಟ್‌ ದರ ₹1,520. ಅಂದರೆ ಮೂರು ಪಟ್ಟು ಹೆಚ್ಚು!

ADVERTISEMENT

ಟಿಕೆಟ್‌ ಪ್ರತಿಯನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಅವರು, ತಮ್ಮ ಊರಿಗೆ ಈ ರೀತಿ ಆಹ್ವಾನ ನೀಡಿದ್ದಾರೆ.

‘ಪ್ರತಿ ಹಬ್ಬ ಅಥವಾ ವಿಶೇಷ ದಿನಗಳ ಸಂದರ್ಭದಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಲ್ಲ ವಿಭಾಗೀಯ ನಿಯಂತ್ರಕರಿಗೆ, ಆರ್‌ಟಿಒಗಳಿಗೆ, ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರಿನಲ್ಲಿ ಪರ ಊರುಗಳ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರಿಗೆ ಸಂಬಳವೇ ಐದಾರು ಸಾವಿರ ಇರುತ್ತದೆ. ಅಂಥವರು ₹2 ಸಾವಿರ ಕೊಟ್ಟು ಪ್ರಯಾಣಿಸಲು ಸಾಧ್ಯವಾಗುತ್ತದೆಯೇ? ಈ ಟಿಕೆಟ್‌ ದರ ಕಂಡು ಎಷ್ಟೋ ಹುಡುಗರು ಹಬ್ಬಕ್ಕೆ ಊರಿಗೆ ಹೋಗುವುದನ್ನೇ ಬಿಟ್ಟಿದ್ದಾರೆ’ ಎಂದು ಅವರು ಹೇಳಿದರು.

ವಿಮಾನ ಪ್ರಯಾಣಕ್ಕಿಂತ ದುಬಾರಿ!

‘ಬೆಂಗಳೂರಿನಿಂದ ಬೆಳಗಾವಿಗೆ ವಿಮಾನ ಪ್ರಯಾಣ ದರಬುಧವಾರ ಒಬ್ಬರಿಗೆ ₹4,300 ಇದೆ. ಆದರೆ, ಖಾಸಗಿ ಬಸ್‌ ಪ್ರಯಾಣ ದರ ₹4,600 ಇದೆ’ ಎಂದು ಅವರು ತಿಳಿಸಿದರು.

‘ಫೇಸ್‌ಬುಕ್‌ನಲ್ಲಿ ಗೆಳೆಯರಿಂದ ₹1,050 ಸಂಗ್ರಹಿಸಿ, ಉಳಿದ ಹಣವನ್ನು ನಾನು ಭರಿಸಿ, ಈ ಟಿಕೆಟ್‌ ಕಾಯ್ದಿರಿಸಿದ್ದೇನೆ. ಮುಂದಾದರೂ, ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು. ಈ ಮಾಫಿಯಾಗೆ ಕಡಿವಾಣ ಹಾಕಬೇಕು’ ಎಂದು ರಾಜೇಶ್‌ ಒತ್ತಾಯಿಸುತ್ತಾರೆ.

ವಾಹನ ದಟ್ಟಣೆ: ‘ರೆಡ್‌ಬಸ್‌’ ನೆರವು

ದೀಪಾವಳಿ ಹಬ್ಬದ ಪ್ರಯುಕ್ತ ವಾರಾಂತ್ಯದಲ್ಲಿ ದೂರದ ಊರಿಗೆ ಪ್ರಯಾಣಿಸುವರ ಅನುಕೂಲಕ್ಕಾಗಿ ಮುಂಗಡ ಟಿಕೆಟ್‌ ಕಾದಿರಿಸುವ ಆನ್‌ಲೈನ್‌ ಸಂಸ್ಥೆ ರೆಡ್‌ಬಸ್‌, ಶುಕ್ರವಾರ ವಿಶೇಷ ನೆರವು ಒದಗಿಸಲಿದೆ.

ಮಡಿವಾಳದಿಂದ ಹೊರಡುವ ಅಸಂಖ್ಯ ಖಾಸಗಿ ಬಸ್‌ಗಳ ನಿಲುಗಡೆಯ ಖಚಿತ ತಾಣ ಮತ್ತು ಹೊರಡುವ ಸಮಯದ ಬಗ್ಗೆ ಪ್ರಯಾಣಿಕರಿಗೆ ಸಂಸ್ಥೆಯ ಸ್ವಯಂಸೇವಕರು ಮಾಹಿತಿ ಮತ್ತು ಅಗತ್ಯ ನೆರವು ನೀಡಲಿದ್ದಾರೆ.

ಸಮವಸ್ತ್ರ ಧರಿಸಿದ 10ರಿಂದ 15 ಜನ ಸ್ವಯಂ ಸೇವಕರು, ವಾಹನಗಳ ತೀವ್ರ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ಒದಗಿಸಲಿದ್ದಾರೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.