ADVERTISEMENT

ಕರ್ನಾಟಕದಲ್ಲಿ ಎಸ್‌ಐಆರ್‌ ಬೇಡ: ನನ್ನ ಮತ ನನ್ನ ಹಕ್ಕು ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:07 IST
Last Updated 18 ಫೆಬ್ರುವರಿ 2026, 16:07 IST
   

ಬೆಂಗಳೂರು: ಮಹಿಳೆಯರು, ಕಾರ್ಮಿಕರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ರಾಜ್ಯದಲ್ಲಿ ನಡೆಸಬಾರದು ಎಂದು ‘ನನ್ನ ಮತ ನನ್ನ ಹಕ್ಕು’ ಸಂಘಟನೆ ಆಗ್ರಹಿಸಿದೆ.

ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ'ರೋಜಾರಿಯೋ ಮಾತನಾಡಿ, ‘ಎಸ್‌ಐಆರ್‌ ಅನಿಯಂತ್ರಿತ ಪ್ರಕ್ರಿಯೆಯಾಗಿದ್ದು, ವಿವಿಧ ರಾಜ್ಯಗಳಲ್ಲಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಜಾರಿಗೆ ತರಲಾಗಿದೆ. ಪಶ್ಚಿಮ ಬಂಗಾಳದಲ್ಲಿ ತಾರ್ಕಿಕ ವ್ಯತ್ಯಯ ಎಂಬ ಹೊಸ ವರ್ಗ ಸೃಷ್ಟಿಸಿ, ದಾಖಲೆಗಳಲ್ಲಿನ ಸಣ್ಣ ಕಾಗುಣಿತ ಅಥವಾ ವಯಸ್ಸಿನ ವ್ಯತ್ಯಾಸಗಳಿಗಾಗಿ ಮತದಾರರಿಗೆ ನೋಟಿಸ್ ನೀಡಲಾಗುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವುದನ್ನು ಉದ್ದೇಶಪೂರ್ವಕವಾಗಿಯೇ ಕ್ಲಿಷ್ಟಗೊಳಿಸಲಾಗಿದೆ’ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ ಬಿ. ಶ್ರೀಪಾದ್ ಭಟ್ ಮಾತನಾಡಿ, ‘ಜನರನ್ನು ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೊರದಬ್ಬುವುದೇ ಎಸ್‌ಐಆರ್‌ ವಿನ್ಯಾಸ. ಪಟ್ಟಿ ಮಾಡಲಾದ 11 ದಾಖಲೆಗಳು ಎಷ್ಟು ಜನರ ಬಳಿ ಇವೆ? ವಲಸೆ ಕಾರ್ಮಿಕರು ಮತ್ತು ಬಡವರು 2002ರ ಹಳೆಯ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹುಡುಕುವುದು ಹೇಗೆ ಸಾಧ್ಯ’ಎಂದು ಪ್ರಶ್ನಿಸಿದರು.

ADVERTISEMENT

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)  ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ‘ಎಸ್‌ಐಆರ್‌ ಸಂವಿಧಾನ ವಿರೋಧಿಯಾಗಿದ್ದು, ಚುನಾವಣಾ ನರಮೇಧವಾಗಿದೆ. ದಲಿತರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಪರವಾಗಿ ಕಾಂಗ್ರೆಸ್ ಸರ್ಕಾರ ಮಾತನಾಡಬೇಕು. ಇದನ್ನು ರಾಜಕೀಯಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ನಾವೆದ್ದು ನಿಲ್ಲದಿದ್ದರೆ’ ಅಭಿಯಾನದ ಮಮತಾ ಯಜಮಾನ್ ಮಾತನಾಡಿ, ‘ಈ ಪ್ರಕ್ರಿಯೆಯಲ್ಲಿ ಮದುವೆಯಾಗಿ ಬಂದ ಸೊಸೆಯಂದಿರ ಹೆಸರನ್ನು ಸೇರಿಸಲೂ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಅವಕಾಶ ನೀಡುತ್ತಿಲ್ಲ. ಅಂತರಜಾತಿ ಮತ್ತು ಅಂತರಧರ್ಮೀಯ ವಿವಾಹವಾದ ಮಹಿಳೆಯರಿಗೆ ಮತ್ತಷ್ಟು ಕಷ್ಟವಾಗಲಿದೆ’ ಎಂದು ಹೇಳಿದರು.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ನಿಶಾ ಗೂಳೂರು ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು ಪರಿಗಣಿಸದೆ ಎಸ್‌ಐಆರ್‌ ವಿನ್ಯಾಸಗೊಳಿಸಲಾಗಿದೆ. ನಮ್ಮ ಸಮುದಾಯ ಸಂಪೂರ್ಣವಾಗಿ ಮತದಾನದ ಹಕ್ಕಿನಿಂದ ವಂಚಿತವಾಗುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ಮತ, ನಮ್ಮ ಹಕ್ಕು ಅಭಿಯಾನದ ಖಲೀಲುಲ್ಲಾ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ - ಕರ್ನಾಟಕದ ಐಶ್ವರ್ಯ ಆರ್. ವಿನಯ್‌ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.