ಬೆಂಗಳೂರು: ಸ್ಮಾರ್ಟ್ ಮೀಟರ್ ದರ ₹ 950 ರಿಂದ ₹ 5 ಸಾವಿರಕ್ಕೆ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
‘ಹಿಂದಿನ ದರದಂತೆಯೇ ಸ್ಮಾರ್ಟ್ ಮೀಟರ್‌ಗಳನ್ನು ಮಾರಾಟ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ಬೆಸ್ಕಾಂ ವ್ಯಾಪ್ತಿಯ ಕಚೇರಿಗಳಲ್ಲಿ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಬೇಕು. ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕ ಹೆಚ್ಚಿಸಿರುವುದು ಖಂಡನೀಯ’ ಎಂದು ಪ್ರತಿಭಟನಕಾರರು ತಿಳಿಸಿದರು.
‘ಎರಡನೇ ದರ್ಜೆಯ ಗುತ್ತಿಗೆ ಪರವಾನಗಿ ಪಡೆದಿರುವ ವಿದ್ಯುತ್ ಗುತ್ತಿಗೆದಾರರಿಗೆ ಪ್ರಥಮ ದರ್ಜೆಯ ಗುತ್ತಿಗೆ ಪರವಾನಗಿ ಪಡೆಯಲು ನಿಗದಿಪಡಿಸಿರುವ ಎಸ್ಸೆಸ್ಸೆಲ್ಸಿ ವಿದ್ಯಾಹರ್ತೆಯಿಂದ ವಿನಾಯಿತಿ ನೀಡಬೇಕು. ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆಯ ವಿದ್ಯುತ್ ಗುತ್ತಿಗೆ ಪರವಾನಗಿ ನೀಡಬೇಕು. 2 ಮೆಗಾ ವ್ಯಾಟ್ ಹಾಗೂ ಅದಕ್ಕಿಂತ ಹೆಚ್ಚಿನ ಮೆಗಾವಾಟ್ ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.
‘ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮವಾಗಿ ಕೃಷಿ ಪಂಪ್‌ಸೆಟ್‌ಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂದು ಸಂಘಧ ಅಧ್ಯಕ್ಷ ವೈ.ಎಚ್. ಆನಂದ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.