ADVERTISEMENT

ಬಲಿಜ ಸಂಘದ ಸದಸ್ಯತ್ವಕ್ಕಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 16:43 IST
Last Updated 25 ಜನವರಿ 2022, 16:43 IST
ಬಲಿಜ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು –ಪ್ರಜಾವಾಣಿ ಚಿತ್ರ
ಬಲಿಜ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಬಲಿಜ ಸಂಘದಲ್ಲಿ ಸದಸ್ಯತ್ವ ನೋಂದಣಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಬಲಿಜ ಸಮುದಾಯದ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಚಾಮರಾಜಪೇಟೆಯಲ್ಲಿನ ಸಂಘದ ಕಚೇರಿ ಎದುರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ‘ಮಾರ್ಚ್‌ನಲ್ಲಿ ಸಂಘಕ್ಕೆ ಚುನಾವಣೆ ನಡೆಯಲಿದೆ. ಈಗಲೇ ಸದಸ್ಯತ್ವ ನೋಂದಣಿ ನಿಲ್ಲಿಸಲಾಗಿದೆ. ಸಂಘದ ಹಾಲಿ ಪದಾಧಿಕಾರಿಗಳು ತಮ್ಮ ಆಪ್ತರಿಗೆ ಮಾತ್ರ ಸದಸ್ಯತ್ವ ನೀಡಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯದಲ್ಲಿ ಬಲಿಜ ಸಮಾಜದ 50 ಲಕ್ಷ ಜನಸಂಖ್ಯೆ ಇದೆ. ಆದರೆ, 12 ಸಾವಿರ ಮಾತ್ರ ಸದಸ್ಯರನ್ನು ಸಂಘ ಹೊಂದಿದೆ. ಸದಸ್ಯತ್ವ ನೋಂದಣಿ ಮಾಡಬಹುದೆಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದರೂ, ಸದಸ್ಯತ್ವ ಸ್ವೀಕರಿಸುತ್ತಿಲ್ಲ ಎಂದು ಸಮಾಜದ ಮುಖಂಡ ಮುನಿರಾಜು ದೂರಿದರು.

ADVERTISEMENT

‘ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇದೆ. ಈ ಹಿಂದೆ ಸದಸ್ಯತ್ವ ನೋಂದಣಿ ಮತ್ತು ಕೊನೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಸದಸ್ಯತ್ವ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘2021ರ ಸೆ.30ರ ತನಕ ಸದಸ್ಯತ್ವ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಪ್ರಚಾರವನ್ನೂ ಮಾಡಲಾಗಿತ್ತು. ಆ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ್ದವರಿಗೆ ಸದಸ್ಯತ್ವ ನೀಡಲಾಗಿದೆ. ಚುನಾವಣೆ ನಡೆಸುವಂತೆ ಡಿಸೆಂಬರ್‌ನಲ್ಲಿ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘದ ಉಪನಿಬಂಧಕರಿಗೆ ಪತ್ರ ಬರೆಯಲಾಗಿದೆ. ಸಂಘದ ನಿಯಮದ ಪ್ರಕಾರ ಈಗ ಸದಸ್ಯತ್ವ ನೀಡಲು ಆಗುವುದಿಲ್ಲ’ ಎಂದು ಸಂಘದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.