ADVERTISEMENT

ಬಿಸಿಯೂಟ ತಯಾರಕರ ಪ್ರತಿಭಟನೆ

ವೇತನ ಹೆಚ್ಚಳಕ್ಕೆ ಆಗ್ರಹ; ಬೇಡಿಕೆ ಈಡೇರಿಸುವರೆಗೂ ಹೋರಾಟ– ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:03 IST
Last Updated 21 ಜನವರಿ 2020, 22:03 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಸಿಯೂಟ ತಯಾರಕ ಮಹಿಳೆಯರು
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಸಿಯೂಟ ತಯಾರಕ ಮಹಿಳೆಯರು   

ಬೆಂಗಳೂರು: ವೇತನ ಹೆಚ್ಚಳ, ಪಿಂಚಣಿ, ನೌಕರಿ ಕಾಯಂ ಹಾಗೂ ಇಎಸ್‌ಐ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯದ ಬಿಸಿಯೂಟ ತಯಾರಕ ಮಹಿಳೆಯರು ನಗರದಲ್ಲಿ ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಕಲಬುರ್ಗಿ, ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ, ಕೋಲಾರ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ‘ಬೆಂಗಳೂರು ಚಲೊ’ ನಡೆಸಿನಗರಕ್ಕೆ ಬಂದ ಮಹಿಳೆಯರು, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ ದವರೆಗೆ ಮೆರವಣಿಗೆ ನಡೆಸಿದರು.

ಬಳಿಕ, ಉದ್ಯಾನದಲ್ಲಿ ಬಹಿರಂಗ ಸಭೆ ನಡೆಸಿದರು. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಹಾಗೂ ‘ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಬುಧವಾರವೂ ಮುಂದುವರಿಯಲಿದೆ.

ADVERTISEMENT

‘ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ.ಸದ್ಯ ತಿಂಗಳಿಗೆ ₹ 2,700 ಸಂಬಳ ನೀಡಲಾಗುತ್ತಿದೆ. ಅದರಲ್ಲಿ ಶೇ 75ರಷ್ಟು ರಾಜ್ಯ ಸರ್ಕಾರ ಹಾಗೂ ಶೇ 25ರಷ್ಟು ಕೇಂದ್ರ ಸರ್ಕಾರದ ಪಾಲಿದೆ. ಬಿಸಿಯೂಟ ತಯಾರಿಕೆ ಜೊತೆಯಲ್ಲೇ ಶಾಲಾ ಕೆಲಸವನ್ನೂ ಮಹಿಳೆಯರು ಮಾಡುತ್ತಿದ್ದಾರೆ. ಕೂಡಲೇ ವೇತನವನ್ನು ಹೆಚ್ಚಳ ಮಾಡ ಬೇಕು’ ಎಂದು ಆಗ್ರಹಿಸಿದರು.

‘ಬಿಸಿಯೂಟ ತಯಾರಿಸುವವರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಬಿಸಿಯೂಟ ಪೂರೈಕೆ ಮಾಡುವ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ನೀಡಬೇಕು. ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಕಾಯ್ದೆಯಡಿ ಸೇರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.