ADVERTISEMENT

ಅಂಬೇಡ್ಕರ್‌ಗೆ ಅಗೌರವ: ಜಡ್ಜ್ ವಜಾಕ್ಕೆ ಆಗ್ರಹ

ವಕೀಲರು, ಪ್ರಗತಿಪರರು, ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 20:11 IST
Last Updated 28 ಜನವರಿ 2022, 20:11 IST
ಬೆಂಗಳೂರು ವಕೀಲರ ಸಂಘದಿಂದ ಹೈಕೋರ್ಟ್‌ ಎದುರು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪದಾಧಿಕಾರಿಗಳಾದ ಇಸ್ಮಾಯಿಲ್, ಭಕ್ತ ವತ್ಸಲ, ಪ್ರವೀಣ್ ಮಿಶ್ರಾ, ರಂಗನಾಥ್, ಶ್ರೀನಿವಾಸ್ ಹಾಗೂ ಇತರರು ಇದ್ದಾರೆ (ಎಡಚಿತ್ರ), ವಕೀಲರು, ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ವಿಧಾನಸೌಧ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಲೇಖಕಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು  –ಪ್ರಜಾವಾಣಿ ಚಿತ್ರಗಳು
ಬೆಂಗಳೂರು ವಕೀಲರ ಸಂಘದಿಂದ ಹೈಕೋರ್ಟ್‌ ಎದುರು ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪದಾಧಿಕಾರಿಗಳಾದ ಇಸ್ಮಾಯಿಲ್, ಭಕ್ತ ವತ್ಸಲ, ಪ್ರವೀಣ್ ಮಿಶ್ರಾ, ರಂಗನಾಥ್, ಶ್ರೀನಿವಾಸ್ ಹಾಗೂ ಇತರರು ಇದ್ದಾರೆ (ಎಡಚಿತ್ರ), ವಕೀಲರು, ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ವಿಧಾನಸೌಧ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಲೇಖಕಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿದರು  –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ‘ಗಣರಾಜ್ಯೋತ್ಸವ ದಿನದ ಕಾರ್ಯಕ್ರಮದಲ್ಲಿ ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಅಗೌರವ ತೋರಿರುವನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇವಜಾಗೊಳಿಸಬೇಕು’ ಎಂದು ಆಗ್ರಹಿಸಿವಕೀಲರು, ಪ್ರಗತಿಪರ, ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ವಿಧಾನಸೌಧದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ನಿರ್ಮಿಸುವ ಮೂಲಕ, ಘಟನೆಯನ್ನು ಖಂಡಿಸಿದರು.

‘ಘಟನೆಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ನ್ಯಾಯಾಧೀಶರ ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲ. ಅಂಬೇಡ್ಕರ್ ವಿರೋಧಿ ಧೋರಣೆ ತೋರಿರುವ ಅವರು, ನ್ಯಾಯಸ್ಥಾನದಲ್ಲಿ ಇರಲು ಅರ್ಹರಲ್ಲ.ಮಲ್ಲಿಕಾರ್ಜುನ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಲೇಖಕಿ ಬಿ.ಟಿ.ಲಲಿತಾ ನಾಯಕ್, ಮಾತನಾಡಿ, ‘ಮಲ್ಲಿಕಾರ್ಜುನ ಗೌಡ ಅವರು ಪೂರ್ವಗ್ರಹಪೀಡಿತರಾಗಿ ಈ ರೀತಿ ವರ್ತಿಸಿದ್ದಾರೆ. ನ್ಯಾಯಾಧೀಶರಾಗಿರಲು ಅರ್ಹರಲ್ಲದ ಅವರನ್ನು ಕೂಡಲೇ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ನ್ಯಾಯವಾದಿ ಎಸ್.ಬಾಲನ್, ‘ನ್ಯಾಯಾಲಯಗಳಲ್ಲಿ ಮೀಸಲಾತಿ ಸರಿಯಾಗಿ ಜಾರಿಯಾಗದ ಕಾರಣ ಮುಂದುವರಿದ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿಯೂ ಎಲ್ಲ ಸಮುದಾಯವರಿಗೆ ಮೀಸಲಾತಿ ಸಿಗಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನ ಶಿಲ್ಪಿಯನ್ನೇಅವಮಾನಿಸಿರುವುದು ದೇಶದ್ರೋಹಕ್ಕೆ ಸಮಾನ. ಸಂವಿಧಾನ ಜಾರಿಯಾದ ದಿನವೇ ಈ ಅಪಚಾರ ಮಾಡಿರುವುದು ಖಂಡನೀಯ’ ಎಂದುದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು ದೂರಿದರು.

ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್, ‘ಈ ಘಟನೆಯಿಂದ ಅಂಬೇಡ್ಕರ್ ಅವರಿಗಷ್ಟೇ ಅಲ್ಲ, ಕೋಟ್ಯಂತರ ಶೋಷಿತರಿಗೂ ಅವಮಾನ ಆಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಆ ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದುಆಗ್ರಹಿಸಿದರು.

ಹೋರಾಟಗಾರ ಸಿರಿಮನೆ ನಾಗರಾಜ್, ‘ಎಲ್ಲ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಬೇಡಿಕೆ ಈಡೇರದಿದ್ದರೆ, ವಾರದೊಳಗೆ ಸಭೆ ನಡೆಸಿ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದೂ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ, ಕಾರ್ಮಿಕ, ವಿದ್ಯಾರ್ಥಿ ಹಾಗೂ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರೂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.