ADVERTISEMENT

ಫಲಕ ಪ್ರದರ್ಶಿಸಿ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 21:34 IST
Last Updated 18 ಜುಲೈ 2020, 21:34 IST
₹15,000 ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದ ವ್ಯಾಪಾರಿಗಳು, ಘೋಷಣಾ ಫಲಕ ಪ್ರದರ್ಶಿಸಿದರು
₹15,000 ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿದ ವ್ಯಾಪಾರಿಗಳು, ಘೋಷಣಾ ಫಲಕ ಪ್ರದರ್ಶಿಸಿದರು   

ಬೆಂಗಳೂರು: 'ಕೊರೊನಾ ಸೋಂಕು ತಡೆಗಾಗಿ ಲಾಕ್‌ಡೌನ್ ಜಾರಿಗೊಳಿಸಿದ ದಿನದಿಂದಲೂ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ₹15,000 ಪರಿಹಾರ ನೀಡಬೇಕು‘ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವ್ಯಾಪಾರಿಗಳು ರಾಜ್ಯದಾದ್ಯಂತ ಶನಿವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಯಶವಂತಪುರ, ಮೂಡಲಪಾಳ್ಯ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಬೀದಿಬದಿ ತಳ್ಳುಗಾಡಿ, ತಾತ್ಕಾಲಿಕ ಮಳಿಗೆ ಹಾಗೂ ಬುಟ್ಟಿ ಇಟ್ಟುಕೊಂಡು ವ್ಯಾಪಾರ ಆರಂಭಿಸಿದ ವ್ಯಾಪಾರಿಗಳು, ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಅಳಲು ತೋಡಿಕೊಂಡರು.

ಬೆಂಗಳೂರು ಜಿಲ್ಲಾ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

‘ಸಾಂಕ್ರಾಮಿಕ ರೋಗ ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಮೂರ್ನಾಲ್ಕು ತಿಂಗಳಿನಿಂದ ವ್ಯಾಪಾರವೇ ಇಲ್ಲದಂತಾಗಿದೆ. ತುತ್ತು ಅನ್ನಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ವ್ಯಾಪಾರಿಗಳು ಹೇಳಿದರು.

‘ಬೀದಿಬದಿ ವ್ಯಾಪಾರಿಗಳಿಗೆ ₹15,000 ಪರಿಹಾರ ವೇತನ ವಿತರಿಸಬೇಕು. ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ಉಪಯೋಗಿಸಬೇಕು. ಕೊರೊನಾ ಸೋಂಕಿತ ಬೀದಿ ವ್ಯಾಪಾರಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಬೀದಿ ವ್ಯಾಪಾರಿಗಳಿಗೆ ದಿನಸಿ ಕಿಟ್ ವಿತರಣೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರಕಾರವು ನೆರವು ನೀಡಬೇಕು. ಬೀದಿಬದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.