
ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ–ಪಿಆರ್‌ಆರ್–1) ಯೋಜನೆಗೆ 2,418 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
ಸುಮಾರು ಐದು ಸಾವಿರ ಕುಟುಂಬಗಳು ಭೂಮಿ ಕಳೆದುಕೊಳ್ಳಲಿದ್ದು, ಕೆಲ ಕುಟುಂಬಗಳು ಪೂರ್ಣ ಅಥವಾ ಭಾಗಶಃ ಭೂಮಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಜಾರಿಯಾದರೆ ನಗರದ ಮೇಲಿನ ಸಂಚಾರ ದಟ್ಟಣೆ ಶೇಕಡ 40ರಷ್ಟು ತಗ್ಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪಿಆರ್‌ಆರ್–1 ನಿರ್ಮಾಣಕ್ಕಾಗಿ ₹27,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿದ್ದು, ಈ ಪೈಕಿ ಭೂ ಸ್ವಾಧೀನಕ್ಕೆ ₹20,000 ಕೋಟಿ ಮತ್ತು ರಸ್ತೆ ನಿರ್ಮಾಣಕ್ಕೆ ₹7,000 ಕೋಟಿ ವೆಚ್ಚ ಮಾಡಲಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಹಣವನ್ನು ಹುಡ್ಕೊದಿಂದ ಸಾಲ ಪಡೆಯಲಾಗಿದೆ.
100 ಮೀಟರ್ ಕಾರಿಡಾರ್‌ನಲ್ಲಿ ಉಳಿಯುವ 35 ಮೀಟರ್‌ನಲ್ಲಿ ವಾಣಿಜ್ಯ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹರಾಜು ಹಾಕಲು ಹಾಗೂ ಟೋಲ್ ಸಂಗ್ರಹಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಬರುವ ಆದಾಯವನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಲಾಗುತ್ತದೆ. ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮೊತ್ತಕ್ಕೆ ಸರ್ಕಾರದ ವತಿಯಿಂದ ಖಾತರಿ ನೀಡಲು ಹಾಗೂ ಬಡ್ಡಿ ಮೊತ್ತವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದಿಂದ ಭರಿಸಲಾಗುತ್ತದೆ. ಈ ಅಡಮಾನ ಪ್ರಕ್ರಿಯೆಗೆ ವಿಧಿಸುವ ಮುದ್ರಾಂಕ ಶುಲ್ಕಕ್ಕೆ ಶೇಕಡ 50ರಷ್ಟು ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ 60:40 ಅನುಪಾತದಲ್ಲಿ 9,583 ಚದರ ಅಡಿ ಅಭಿವೃದ್ಧಿಪಡಿಸಿದ ವಸತಿ ನಿವೇಶನಗಳನ್ನು ನೀಡಲಾಗುತ್ತದೆ. ವಾಣಿಜ್ಯ ನಿವೇಶನಗಳನ್ನು ಆಯ್ಕೆ ಮಾಡಿಕೊಂಡವರಿಗೆ 8,385 ಚದರ ಅಡಿ ಜಾಗವನ್ನು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.
ಮುಖ್ಯ ಜಂಕ್ಷನ್‌ಗಳ ಬಳಿ ವಿಶ್ರಾಂತಿ ಕೇಂದ್ರಗಳು, ವಾಣಿಜ್ಯ, ವಸತಿ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸುಮಾರು 50–100 ಎಕರೆ ಭೂಮಿಯನ್ನು ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ. ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಿದ ಬಳಿಕ ಉಳಿದ ಜಾಗದಲ್ಲಿ ಮಾಲ್, ರೆಸ್ಟೋರೆಂಟ್, ವಾಣಿಜ್ಯ, ಪೆಟ್ರೋಲ್ ಬಂಕ್, ವಸತಿ ಉದ್ದೇಶಗಳಿಗೆ ಹರಾಜು ಹಾಕಲು ನಿರ್ಧರಿಸಲಾಗಿದೆ.
ತುಮಕೂರು ರಸ್ತೆಯ ಮಾದನಾಯಕನಹಳ್ಳಿ ರಸ್ತೆಯ ಜಂಕ್ಷನ್, ಹೆಸರಘಟ್ಟ ರಸ್ತೆಯ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆಯ ಜಂಕ್ಷನ್, ಹೆಣ್ಣೂರು ರಸ್ತೆಯ ಜಂಕ್ಷನ್, ಚನ್ನಸಂದ್ರ ರಸ್ತೆಯ ಜಂಕ್ಷನ್‌ಗಳಲ್ಲಿ ಕ್ಲೋವರ್ ಲೀಫ್ ನಿರ್ಮಿಸಲಾಗುತ್ತದೆ. ಚೊಕ್ಕನಹಳ್ಳಿ ರಸ್ತೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.
ಬಿಬಿಸಿ ಯೋಜನೆಯು 117 ಕಿ.ಮೀ. ಉದ್ದ ಇದ್ದು, ತುಮಕೂರು ರಸ್ತೆಯಿಂದ ಯಲಹಂಕ, ವೈಟ್‌ಫೀಲ್ಡ್, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರು ಸುತ್ತುವರಿದು, ಮತ್ತೆ ತುಮಕೂರು ರಸ್ತೆಯ ಬಿಐಇಸಿ ಬಳಿ ಸಂಪರ್ಕ ಸಾಧಿಸಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ. ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ.
ಬಿಬಿಸಿ ಯೋಜನೆ ಅನುಷ್ಠಾನದಿಂದ ಬೆಂಗಳೂರಿನ ಉತ್ತರ ಭಾಗದ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಭೂಮಿ ಕಳೆದುಕೊಳ್ಳುವ ಶೇಕಡ 70ರಷ್ಟು ಮಾಲೀಕರ ಉಳಿದ ಭೂಮಿಯ ಮೌಲ್ಯವು ರಸ್ತೆ ನಿರ್ಮಾಣದಿಂದ ಹೆಚ್ಚಾಗುತ್ತದೆ.ಎಲ್.ಕೆ.ಅತೀಕ್ ಅಧ್ಯಕ್ಷ ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.