ಬೆಂಗಳೂರು: ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೇಲೆ ಯುವಕರ ಗುಂಪೊಂದು ಕಾರು ಹತ್ತಿಸಲು ಯತ್ನಿಸಿದ ಘಟನೆ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಠಾಣಾ ವ್ಯಾಪ್ತಿಯ ಮಾರ್ಕ್ ಬಾರ್ ಬಳಿ 4–5 ಜನರ ಗುಂಪು ವಾಹನ ನಿಲ್ಲಿಸಿಕೊಂಡು ಮದ್ಯ ಸೇವಿಸುತ್ತಿತ್ತು. ಗಸ್ತಿನಲ್ಲಿದ್ದ ಪಿಎಸ್‌ಐ ಮುರುಳಿ ಅವರು ಬಾರ್ ಬಳಿ ನಿಂತಿದ್ದ ಯುವಕರನ್ನು ಪ್ರಶ್ನಿಸಲು ಮುಂದಾದರು. ಪಿಎಸ್‌ಐ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಕಾರು ಒಳಗೆ ಕುಳಿತುಕೊಂಡಿದ್ದಾರೆ. ತಕ್ಷಣ ಚಾಲಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ವಾಹನ ನಿಲ್ಲಿಸುವಂತೆ ಅಧಿಕಾರಿ ಹೇಳಿದರೂ, ವೇಗವಾಗಿ ಅವರ ಮೇಲೆ ಹತ್ತಿಸಲು ಯತ್ನಿಸಿ, ಪರಾರಿಯಾಗಿದ್ದಾರೆ.
ಈ ವೇಳೆ ಪಿಎಸ್‌ಐ ಅವರ ಕೈಗೆ ಗಾಯವಾಗಿ ರಕ್ತ ಸುರಿದಿದೆ. ವಾಹನದ ಮೇಲೆ ಜಯ ಕರ್ನಾಟಕ ಸಂಘಟನೆ ಎಂಬ ಹೆಸರು ಇದೆ. ವಾಹನದ ನೋಂದಣಿ ಸಂಖ್ಯೆ ಆಧರಿಸಿ, ಮಾಲೀಕನನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.