ADVERTISEMENT

ಪಿಎಸ್‌ಐ ಅಕ್ರಮ: ನ್ಯಾಯಾಂಗ ಬಂಧನಕ್ಕೆ ಕುಶಾಲ್, ಹಲಸೂರು ಠಾಣೆಯಲ್ಲಿ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:45 IST
Last Updated 10 ಜೂನ್ 2022, 19:45 IST
ಪಿಎಸ್‌ಐ ಅಕ್ರಮ: ಮೊದಲ ರ‍್ಯಾಂಕ್ ಪಡೆದಿದ್ದ ಕುಶಾಲ್ ಕುಮಾರ್ ವಶಕ್ಕೆ
ಪಿಎಸ್‌ಐ ಅಕ್ರಮ: ಮೊದಲ ರ‍್ಯಾಂಕ್ ಪಡೆದಿದ್ದ ಕುಶಾಲ್ ಕುಮಾರ್ ವಶಕ್ಕೆ   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದ ಅಭ್ಯರ್ಥಿ ಕುಶಾಲ್‌ಕುಮಾರ್ ಜೆ. ಅವರನ್ನು ಅಕ್ರಮ ಎಸಗಿದ್ದ ಆರೋಪದಡಿ ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿ ಗ್ರಾಮದ ಕುಶಾಲ್‌ಕುಮಾರ್ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರು. ಒಎಂಆರ್ ಅಸಲಿ ಪ್ರತಿ ಹಾಗೂ ಕಾರ್ಬನ್ ಪ್ರತಿಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದ್ದರಿಂದ ಅವರು ಸಹ ಅಕ್ರಮ ಎಸಗಿರುವುದು ಸಿಐಡಿ ತನಿಖೆಯಿಂದ ಗೊತ್ತಾಗಿದೆ.

‘ಕೇಂಬ್ರಿಡ್ಜ್ ರಸ್ತೆಯಲ್ಲಿರುವ ಸೇಂಟ್ ಆ್ಯನ್ಸ್‌ ಗರ್ಲ್ಸ್ ಪಿಯು ಕಾಲೇಜಿನ ಕೇಂದ್ರದಲ್ಲಿ ಕುಶಾಲ್ ಪರೀಕ್ಷೆ ಬರೆದಿದ್ದ. ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದ ಈತ, ಬಹುತೇಕ ಪ್ರಶ್ನೆಗಳಿಗೆ ಉತ್ತರ ಬರೆಯದೇ ಒಎಂಆರ್ ಪ್ರತಿ ಖಾಲಿ ಬಿಟ್ಟಿದ್ದ. ಅದೇ ಒಎಂಆರ್ ಪ್ರತಿಯನ್ನು ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ತಿದ್ದುಪಡಿ ಮಾಡಿದ್ದರೆಂಬುದು ಗೊತ್ತಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘172 ಅಭ್ಯರ್ಥಿಗಳ ಒಎಂಆರ್ ಅಸಲು ಪ್ರತಿ ಹಾಗೂ ಕಾರ್ಬನ್ ಪ್ರತಿಯನ್ನು ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕುಶಾಲ್ ಒಎಂಆರ್ ಪ್ರತಿ ಬಗ್ಗೆ ವರದಿ ಬಂದಿದ್ದು, ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ಹೀಗಾಗಿ, ಆತನ ವಿರುದ್ಧ ಹಲಸೂರು ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ’ ಎಂದೂ ತಿಳಿಸಿವೆ.

‘ಕುಶಾಲ್‌ನನ್ನು ಹಲಸೂರು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣವು ಸಿಐಡಿ ವರ್ಗವಾಗಲಿದ್ದು, ಆ ನಂತರ ಬಾಡಿ ವಾರೆಂಟ್ ಮೂಲಕ ಕುಶಾಲ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.