ADVERTISEMENT

ಪಿಎಸ್ಐ ಅಕ್ರಮ: ದರ್ಶನ್‌ ಗೌಡ ಸಿಐಡಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:39 IST
Last Updated 7 ಜೂನ್ 2022, 19:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಅಭ್ಯರ್ಥಿ ದರ್ಶನ್‌ ಗೌಡ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಮುಂದಿನ 14 ದಿನಗಳವರೆಗೆ ಕಸ್ಟಡಿಗೆ ಪಡೆದಿದ್ದಾರೆ.

ಯಲಹಂಕ ನ್ಯೂ ಟೌನ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸೋಮವಾರ ಬಂಧಿಸಲಾಗಿದ್ದ ದರ್ಶನ್‌ ಗೌಡ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಿಐಡಿ ಅಧಿಕಾರಿಗಳು, ದರ್ಶನ್‌ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ರಾಮಮೂರ್ತಿನಗರ ಹಾಗೂ ಕೋರಮಂಗಲ ಠಾಣೆಯಲ್ಲೂ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಆರೋಪಿಗಳಾದ ಕಲಾಸಿಪಾಳ್ಯ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಎಚ್‌.ಬಿ. ಹರೀಶ್, ನೆಲಮಂಗಲ ಠಾಣೆ ಕಾನ್‌ಸ್ಟೆಬಲ್ ಎಚ್‌.ಜಿ. ಮೋಹನ್‌
ಕುಮಾರ್ ಹಾಗೂ ದಿಲೀಪ್‌ಕುಮಾರ್ ಅವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೂವರನ್ನೂ ಪೊಲೀಸರೇ ಸದ್ಯಕ್ಕೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ADVERTISEMENT

‘ಬಂಧಿತ ಆರೋಪಿಗಳು, ಮಧ್ಯವರ್ತಿಗಳ ಮೂಲಕ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಶಾಮೀಲಾಗಿ, ಒಎಂಆರ್ ಪ್ರತಿ ತಿದ್ದುಪಡಿ ಮಾಡಿ ಅಕ್ರಮವಾಗಿ ಆಯ್ಕೆಯಾಗಿದ್ದರು. ಈ ಎಲ್ಲ ಅಂಶಗಳನ್ನು ಪುರಾವೆ ಸಮೇತ ನ್ಯಾಯಾಲಯಕ್ಕೆ ತಿಳಿಸಿ ಆರೋಪಿ ದರ್ಶನ್‌ನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಉಳಿದ ಮೂವರು ಆರೋಪಿಗಳನ್ನು ಬುಧವಾರ ಅಥವಾ ಗುರುವಾರ ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದೂ ತಿಳಿಸಿವೆ.

ವಿಚಾರಣೆ ನಡೆಸಿ ನೋಟಿಸ್: ‘ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿಯು ಬಂಧಿತ ಆರೋಪಿಗಳಿಂದ ಹಣ ಪಡೆದಿರುವ ಮಾಹಿತಿ ಇದೆ. ಆರೋಪಿಗಳ ವಿಚಾರಣೆ ನಡೆಸಿದ ಬಳಿಕವೇ ಮತ್ತಷ್ಟು ಮಂದಿಗೆ ನೋಟಿಸ್ ನೀಡಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

'ಅಕ್ರಮ ಎಸಗಿದ್ದ 22 ಅಭ್ಯರ್ಥಿಗಳ ವಿರುದ್ಧ ಈ ಹಿಂದೆ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ನೌಕರರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಅಗತ್ಯವೆನಿಸಿದರೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲಾಗುವುದು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.