ADVERTISEMENT

ಜಾತಿಸೂಚಕ ಹಟ್ಟಿ, ಹಾಡಿಗಳ ಹೆಸರು ಬದಲಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 19:59 IST
Last Updated 26 ಮಾರ್ಚ್ 2022, 19:59 IST

ಬೆಂಗಳೂರು: ಜಾತಿಸೂಚಕ ಜನ ವಸತಿ ಪ್ರದೇಶಗಳ ಹೆಸರುಗಳನ್ನು ರದ್ದುಪಡಿಸುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

ಶಾಸಕರ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಅಲೆಮಾರಿ, ಬುಡಕಟ್ಟು, ದಲಿತ ಸಮುದಾಯಗಳ ಪ್ರತಿನಿಧಿಗಳು ಈ ಕುರಿತು ಚರ್ಚಿಸಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರತಿಕ್ರಿಯಿಸಿದ್ದ ಸಚಿವ ಅಶೋಕ, ಕಾಡುಗೊಲ್ಲರಹಟ್ಟಿ, ವಡ್ಡರಹಟ್ಟಿ, ಲಂಬಾಣಿ ತಾಂಡಾ, ಕುರುಬರ ದೊಡ್ಡಿ, ಹಾಡಿ, ಕಾಲೊನಿಗಳ ಹೆಸರುಗಳನ್ನು ರದ್ದುಪಡಿಸುವುದಾಗಿ ಹೇಳಿದ್ದರು. ಈ ತೀರ್ಮಾನ ಜಾರಿಯಾದರೆ ಹಲವಾರು ಅಲಕ್ಷಿತ ಸಮುದಾಯಗಳು ತಮ್ಮ ಸಾಂಸ್ಕೃತಿಕ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಆದಿವಾಸಿ, ಅಲೆಮಾರಿ, ಬುಡಕಟ್ಟು ಸಮಯದಾಯ ದವರು ಇವತ್ತಿಗೂ ತಮ್ಮ ಅನನ್ಯ ಸಾಂಸ್ಕೃತಿಕ ಜೀವನ ವಿಧಾನವನ್ನು ಉಳಿಸಿಕೊಂಡಿದ್ದಾರೆ. ತಾವು ವಾಸಿಸುವ ಸ್ಥಳಗಳೇ ಅವರ ಗುರುತುಗಳಾಗಿವೆ. ಸರ್ಕಾರ ಯಾವುದೇ ಕಾರಣಕ್ಕೂ ಹೆಸರು ಬದಲಾವಣೆ ಮಾಡಬಾರದು ಎಂದರು.

ಲೇಖಕಿ ಬಿ.ಟಿ ಲಲಿತಾನಾಯಕ್, ‘ನಮ್ಮ ಸಾಂಸ್ಕೃತಿಕ ನಾಯಕರ ಹೆಸರು ಗಳಿರುವ ತಾಂಡಾದ ಹೆಸರನ್ನು ಬದಲಾವಣೆ ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ನಾಶಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ’ ಎಂದರು.

ಸಭೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಸಿ.ಎಸ್. ದ್ವಾರಕಾನಾಥ್, ಬುಡಕಟ್ಟು ರಾಷ್ಟ್ರೀಯತೆಯೇ ಭಾರತದ ನಿಜವಾದ ರಾಷ್ಟ್ರೀಯತೆ. ಜಗತ್ತಿನ ಬಹುತೇಕ ಅಲೆಮಾರಿ ಬುಡಕಟ್ಟು ಸಮುದಾಯಗಳು ಇಂದಿಗೂ ತಮ್ಮ ಅಸ್ಮಿತೆ ಉಳಿಸಿಕೊಂಡಿವೆ. ಸರ್ಕಾರವು ದಾಖಲೆ ರಹಿತ ಜನವಸತಿ ಪ್ರದೇಶಗಳಾದ ಹಟ್ಟಿ, ಹಾಡಿ, ಕಾಲೊನಿ ಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಬೇಕು ಎಂದರು.

ಸಭೆಯಲ್ಲಿ ಲಂಬಾಣಿ ಸಮುದಾಯದ ಮುಖಂಡರಾದ ಅನಂತ ನಾಯಕ್, ಗೋವಿಂದಸ್ವಾಮಿ, ಕುಂಬಾರ ಸಮುದಾಯದ ನಾಗೇಶ್, ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿಯ ಜಿ.ಕೆ. ನಾಗಣ್ಣ, ಉಜ್ಜಜ್ಜಿ ರಾಜಣ್ಣ, ಸುನೀಲ್ ಕುಮಾರ್, ಇರುಳಿಗ ಸಮುದಾಯದ ಸಹದೇವ, ಸುಡುಗಾಡು ಸಿದ್ದ ಸಮುದಾಯದ ಹನುಮಂತಪ್ಪ‌, ನಾಗರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.