ರಾಹುಲ್ ಗಾಂಧಿ
ಪಿಟಿಐ ಚಿತ್ರ
ಬೆಂಗಳೂರು: ಮತಗಳ್ಳತನ ಆರೋಪ ಸಂಬಂಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಇಂದು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದ ಬಗ್ಗೆ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ಈ ಕುರಿತು ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಬಿಜೆಪಿ ಹಂಚಿಕೊಂಡಿದೆ.
ನಿಮ್ಮ ಅಜ್ಜಿ ಇಂದಿರಾಗಾಂಧಿ ಮತಗಳ್ಳತನ ಮಾಡಿ ಚುನಾವಣೆಯಲ್ಲಿ ಗೆದ್ದಿರಲಿಲ್ಲವೇ? ಎಂದು ರಾಹುಲ್ ಗಾಂಧಿ ಅವರನ್ನು ಕೆಣಕಿದೆ.
ಮತಗಳ್ಳತನ ಮಾಡಿ ಚುನಾವಣೆಯಲ್ಲಿ ಗೆದ್ದ ಅಜ್ಜಿ ಇಂದಿರಾಗಾಂಧಿ ತಮ್ಮ ಮತಗಳ್ಳತನ ಅಲಹಾಬಾದ್ ಕೋರ್ಟ್‌ನಲ್ಲಿ ಸಾಬೀತಾಗಿದ್ದಕ್ಕಾಗಿ ಭಾರತದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂದು ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಮೊಮ್ಮಗ ರಾಹುಲ್ ಗಾಂಧಿ ತಮ್ಮ ಸೋಲಿಗೆ "ಮತಗಳ್ಳತನ" ಕಾರಣ ಎಂಬ ಸುಳ್ಸುದ್ದಿ ಹರಿಬಿಟ್ಟು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಮತಗಳ್ಳತನ ಕಾಂಗ್ರೆಸ್ ನ ಡಿಎನ್‌ಎಯಲ್ಲಿದೆ ಎಂಬುದಕ್ಕೆ ಮತ್ತೊಂದು ಸಬೂತು ದೊರೆತಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಹ ಅಂದು ಕಾಂಗ್ರೆಸ್ ಮತಗಳ್ಳತನ ಮಾಡುವ ಮೂಲಕ ಸೋಲಿಸಿತ್ತು. ಗಾಂಧಿ ಅವರೆ, ನಿಮ್ಮ ಮುತ್ತಾತ ಮಾಡಿದ ಈ ಮಹಾದ್ರೋಹಕ್ಕೆ ಈಗಲಾದರೂ ನೀವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಳಿ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದೆ.
ಇನ್ನು ಬೆಂಗಳೂರಿನಲ್ಲಿ ಮಾತನಾಡಿರುವ ರಾಹುಲ್, 'ಕಳೆದ 10 ವರ್ಷಗಳ ಮತದಾರರ ಪಟ್ಟಿ ಹಾಗೂ ವಿಡಿಯೊ ರೆಕಾರ್ಡಿಂಗ್ ಅನ್ನು ತಕ್ಷಣವೇ ಚುನಾವಣಾ ಆಯೋಗವು ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.