ADVERTISEMENT

ಕೆಂಗೇರಿ | ಭಾರಿ ಮಳೆ: 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:40 IST
Last Updated 19 ಮೇ 2025, 15:40 IST
ಭಾರಿ ಮಳೆಗೆ ವಿಜಯಶ್ರೀ ಬಡಾವಣೆಯಲ್ಲಿ ಕಾರೊಂದು ಮುಳುಗಿರುವುದು
ಭಾರಿ ಮಳೆಗೆ ವಿಜಯಶ್ರೀ ಬಡಾವಣೆಯಲ್ಲಿ ಕಾರೊಂದು ಮುಳುಗಿರುವುದು   

ಕೆಂಗೇರಿ: ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಭಾರಿ ಮಳೆಯಿಂದಾಗಿ ಕೆಂಗೇರಿ ಪೆಟ್ರೋಲ್‌ ಬಂಕ್ ಬಳಿಯ ಸುಮಾರು 30 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಪಕ್ಕದಲ್ಲೇ ಇರುವ ರಾಜಕಾಲುವೆ ತುಂಬಿ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು ನೀರು ಪಾಲಾದವು. 

ಕೆಂಗೇರಿ ಗುಟ್ಟೆ ಆಂಜನೇಯ ಸ್ವಾಮಿ ಬೀದಿ ಬಳಿಯ ರಸ್ತೆಗಳಲ್ಲೂ ರಾಜಕಾಲುವೆ ನೀರು ಹರಿದು ಸುತ್ತಮುತ್ತಲ ಒಂಬತ್ತು ಮನೆಗಳಿಗೆ ನೀರು ನುಗ್ಗಿತು. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಳಾಗಿವೆ ಎಂದು ಸ್ಥಳೀಯ ನಿವಾಸಿ ವೇಣು ಮಾಧವ ಭಟ್‌ ಅವಲತ್ತುಕೊಂಡರು. 

ADVERTISEMENT

‘ವಿಜಯಶ್ರೀ ಬಡಾವಣೆಯ 5, 6 ಮತ್ತು 7ನೇ ಅಡ್ಡರಸ್ತೆಯಲ್ಲಿರುವ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲ ಮನೆಯ ಫ್ರಿಜ್‌, ಟಿವಿಗಳಿಗೆ ಹಾನಿಯಾಗಿದೆ. ಸಮೀಪದಲ್ಲಿರುವ ವೆಂಕಟೇಶ್ವರ ದೇವಾಲಯ ಸಮೀಪದಲ್ಲಿ 2 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿತ್ತು‘ ಎಂದು ಸ್ಥಳೀಯ ಮುಖಂಡ ಮೈಲಸಂದ್ರ ನಾಗರಾಜ್‌ ತಿಳಿಸಿದರು.

ಶಾಸಕರ ನೆರವು: ಮಳೆಯಿಂದ ಸಮಸ್ಯೆಗೆ ಈಡಾದ ಸ್ಥಳಗಳಿಗೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿ ನೆರವಿನೊಂದಿಗೆ ಮಳೆ ನೀರು ತೆರವುಗೊಳಿಸಿದರು.

‘ಮಳೆ ನೀರು ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬಾಧಿತವಾದ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಲಾಗುವುದು’ ಎಂದು ಶಾಸಕರು ತಿಳಿಸಿದರು.

ವಿಜಯಶ್ರೀ ಬಡಾವಣೆಯ ಶ್ರೀ ವೆಂಕಟೇಶ್ವರ ದೇವಾಲಯದ ಬಳಿ ನಿಂತಿರುವ ಮಳೆ ನೀರು
ರಾಜಕಾಲುವೆ ನೀರಿನಿಂದ ಮುಳುಗಡೆಗೊಂಡಿರುವ ಗುಟ್ಟೆ ಆಂಜನೇಯ ಸ್ವಾಮಿ ದೇವಾಲಯ ಬೀದಿ
ರಾಜಕಾಲುವೆ ನೀರಿನಿಂದ ಮುಳುಗಡೆಗೊಂಡಿರುವ ಗುಟ್ಟೆ ಆಂಜನೇಯ ಸ್ವಾಮಿ ದೇವಾಲಯ ಬೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.