ADVERTISEMENT

ಬೆಂಗಳೂರು: ನ.28ರಿಂದ ಬೃಹತ್‌ ರಾಜ ಭವನ ಚಲೋ ಮಹಾಧರಣಿ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 14:38 IST
Last Updated 10 ನವೆಂಬರ್ 2023, 14:38 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಬೆಂಗಳೂರು: ರೈತ–ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನ.26ರಿಂದ 28ರವರೆಗೆ ಬೃಹತ್‌ ರಾಜಭವನ ಚಲೋ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ‘ಸಂಯುಕ್ತ ಹೋರಾಟ–ಕರ್ನಾಟಕ’ ಸಂಯೋಜಕರಾದ ಬಡಗಲಪುರ ನಾಗೇಂದ್ರ, ಎಸ್‌.ಆರ್‌. ಹಿರೇಮಠ್‌ ತಿಳಿಸಿದರು.

ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಪರ್ಯಾಯ ಜನಪರ ನೀತಿಗಳನ್ನು ರೂಪಿಸಲು 72 ಗಂಟೆಗಳ ಕಾಲ ಮಹಾಧರಣಿ ಹಮ್ಮಿಕೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಭಾಗವಹಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೆಹಲಿಯಲ್ಲಿ ಸತತ 13 ತಿಂಗಳುಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ್ದರಿಂದ ಮೋದಿ ಸರ್ಕಾರವು ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಿತು. ಆದರೆ, ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿ, ವಿದ್ಯುತ್‌ ತಿದ್ದುಪಡಿ ಮಸೂದೆ ರದ್ದು ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ADVERTISEMENT

ಬೀಜ, ರಸಗೊಬ್ಬರ, ವಿದ್ಯುತ್‌ಗೆ ನೀಡುವ ಸಬ್ಸಿಡಿ ಹೆಚ್ಚಿಸಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬುದೂ ಸೇರಿದಂತೆ 24 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಸಂಯೋಜಕರಾದ ಜಿ.ಸಿ. ಬಯ್ಯಾರೆಡ್ಡಿ, ಮಾವಳ್ಳಿ ಶಂಕರ್‌,ಎಚ್‌.ವಿ. ದಿವಾಕರ್‌, ಮುಖಂಡರಾದ ಎಸ್‌. ವರಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.