ADVERTISEMENT

ರಾಜಕಾಲುವೆ ಒತ್ತುವರಿ ಮುಲಾಜಿಲ್ಲದೇ ತೆರವಿಗೆ ಸಿಎಂ ಬೊಮ್ಮಾಯಿ ಸೂಚನೆ

ರಾಜಕಾಲುವೆ ಶಾಶ್ವತ ದುರಸ್ತಿ: ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಲು ಸಲಹೆ                

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 7:51 IST
Last Updated 23 ನವೆಂಬರ್ 2021, 7:51 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದರು.   

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶ್ರೀಮಂತರು ಮಾಡಿರುವ ಒತ್ತುವರಿಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸಲಾಗುತ್ತದೆ. ಒತ್ತುವರಿ ಮಾಡಿರುವ ಬಡವರಿಗೆ ನಿವೇಶನಗಳನ್ನು ಒದಗಿಸಿ ನಂತರ ತೆರವು ಮಾಡಲಾಗುತ್ತದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಳೆಯಿಂದ ಪ್ರವಾಹ ಉಂಟಾಗಿರುವ ಯಲಹಂಕ ಹಾಗೂ ಜಕ್ಕೂರು ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿಯವರು ಸುದ್ದಿಗಾರರ ಜೊತೆ ಮಾತನಾಡಿದರು.

ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶ ಇದೆ. ಮೀಸಲು ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ಗಳಿರುವುದು ದೊಡ್ಡ ಪ್ರಮಾಣದಲ್ಲಿ ಮಳೆಯಾದಾಗಲೇ ಗೊತ್ತಾಗುತ್ತದೆ. ಮೀಸಲು ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಅಲ್ಲಿ ಮಳೆ ನೀರು ಹರಿದು ಹೋಗಲು ಅನುಕೂಲ ಕಲ್ಪಿಸಲು ಅವರು ಜಾಗ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಅವರಿಗೇ ತೊಂದರೆ. ಈ ಕುರಿತು ಒಂದು ಅಭಿಯಾನ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಅಧಿಕಾರಿಗಳು ರಾಜಕಾಲುವೆ ಮೇಲೆ, ಅಥವಾ ಅದರ ಮೀಸಲು ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಿಸಲು ಅನುಮತಿ ನೀಡಿದ್ದರೆ ಅದು ತಪ್ಪು. ಈ ಬಗ್ಗೆ ಮುಖ್ಯ ಆಯುಕ್ತರು ನೋಟಿಸ್‌ ನೀಡಿ ಇಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

‘ಪ್ರವಾಹ ಉಂಟಾಗಲು ರಾಜಕಾಲುವೆ ಒತ್ತುವರಿಯ ಜೊತೆ ಇತರ ಕಾರಣಗಳೂ ಇವೆ. ಕೆಲವೇ ತಾಸುಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. 11 ಕೆರೆಗಳ ನೀರು ಯಲಹಂಕ ಹಾಗೂ ಜಕ್ಕೂರು ಕೆರೆಗಳನ್ನು ಸೇರುತ್ತದೆ. ಇಷ್ಟು ವರ್ಷ ಇಷ್ಟೊಂದು ಸಮಸ್ಯೆ ಆಗಿರಲಿಲ್ಲ. ಈ ಬಾರಿ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿ ಸಂಪೂರ್ಣ ಕರ್ನಾಟಕದಲ್ಲಿ ಮಳೆಯಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲೂ ಭಾರಿ ಮಳೆಯಾಗಿದೆ. 11 ಕೆರೆಗಳು ತುಂಬಿ ಹರಿದು ಕೋಡಿ ಹರಿದಿವೆ. ರಾಜಕಾಲುವೆಗಳ ಗಾತ್ರ ಕಡಿಮೆ ಇದೆ. ಕೆರೆ ದೊಡ್ಡದಿದೆ. ಅದರ ಹೊರ ಹರಿವು ದೊಡ್ಡ ಪ್ರಮಾಣದಲ್ಲಿದೆ. ಅದರ ಒತ್ತಡ ತಾಳಲು ರಾಜಕಾಲುವೆ ಸಾಲುತ್ತಿಲ್ಲ. 11 ಕೆರೆಗಳ ನೀರು ಯಲಹಂಕ ಹಾಗೂ ಜಕ್ಕೂರು ಕೆರೆಗೆ ಸೇರಿಕೊಂಡಿದೆ. ಈ ಪ್ರದೇಶದಲ್ಲಿ ರಾಜಕಾಲುವೆ ಗಾತ್ರವೂ ಸಣ್ಣದಿರುವುದು, ರಾಜಕಾಲುವೆ ಅತಿಕ್ರಮಣ ಹಾಗೂ ಕೆಲವೆಡೆ ಕಾಲುವೆಗಳು ಮುಚ್ಚಿ ಹೋಗಿರುವುದು ಕೂಡಾ ಪ್ರವಾಹಕ್ಕೆ ಕಾರಣ’ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.

ಮಾಸ್ಟರ್‌ ಪ್ಲ್ಯಾನ್‌ಗೆ ಸೂಚನೆ

11 ಕೆರೆಗಳು ತುಂಬಿ ಹರಿದಾಗ ನೀರು ಯಲಹಂಕ ಕೆರೆ, ಜಕ್ಕೂರು ಕೆರೆ, ರಾಚೇನಹಳ್ಳಿ ಕೆರೆ ಹಾಗೂ ಇನ್ನೂ ನಾಲ್ಕೈದು ಕೆರೆಗಳನ್ನು ದಾಟಿ ತಮಿಳುನಾಡಿನತ್ತ ಹರಿಯುತ್ತದೆ. ಇಲ್ಲಿನ ರಾಜಕಾಲುವೆಗಳ ಗಾತ್ರ ಕಿರಿದಾಗಿದೆ. ಕೆಲವೆಡೆ ಕಾಲುವೆಯೇ ಮುಚ್ಚಿ ಹೋಗಿದೆ. ಕೆಲವೆಡೆ ಅತಿಕ್ರಮಣ ತೆರವುಗೊಳಿಸಬೇಕಿದೆ. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವಂತೆ ಶಾಶ್ವತ ರಾಜಕಾಲುವೆ ನಿರ್ಮಿಸಲು ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಸದ್ಯ ಇಲ್ಲಿನ ರಾಜಕಾಲುವೆಗಳ ಅಗಲ 8 ಅಡಿಗಳಷ್ಟು ಮಾತ್ರ ಇದೆ. ಅದು 30 ಅಡಿಗಳಷ್ಟಾದರು ಆಗಬೇಕು. ಹಾಗಾಗಿ ರಾಜಕಾಲುವೆ ವಿಸ್ತರಣೆಗೆ ಅಗತ್ಯವಿರುವ ಕಡೆ ಭೂಮಿ ಪಡೆದುಕೊಳ್ಳಲು ಟಿಡಿಆರ್‌ ನೀಡುವಂತೆ ಸಲಹೆ ನೀಡಿದ್ದೇನೆ. ವಸತಿ ಸಮುಚ್ಚಯಗಳ ಬಳಿ ತುಂಬಿರುವ ನೀರು ಹೊರಹಾಕಲು ಚರಂಡಿ ನಿರ್ಮಿಸಲು ಸೂಚಿಸಿದ್ದೇನೆ. ರಾಜಕಾಲುವೆ ರಾಷ್ಟ್ರೀಯ ಹೆದ್ದಾರಿಯ ಅಡಿಯಿಂದ ಹಾದುಹೋಗಬೇಕಿದೆ. ಇದಕ್ಕೂ ಕ್ರಮ ಕೈಗೊಂಡರೆ ಮಾತ್ರ ಶಾಶದ್ವತ ಪರಿಹಾರ ಸಿಗಲಿದೆ. ಈ ಬಗ್ಗೆಯೂ ಸೂಚನೆ ನೀಡಿದ್ದೇನೆ’ ಎಂದು ಬೊಮ್ಮಾಯಿ ವಿವರಿಸಿದರು.

ಇಡಿ ಬೆಂಗಳೂರಿನಲ್ಲಿ ಸಮಸ್ಯೆ ಇದೆ. ಈ ವರ್ಷ 50 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಿದ್ದೇವೆ. ಇನ್ನೂ 50 ಕಿ.ಮೀ ಹೆಚ್ಚುವರಿಯಾಗಿ ಅಭಿವೃದ್ಧಿಪಡಿಸಲು ಮೊನ್ನೆ ನಡೆದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಎಲ್ಲೆಲ್ಲಿ ರಾಜಕಾಲುವೆ ಸಮಸ್ಯೆ ಇದೆ, ಎಲ್ಲೆಲ್ಲಿ ಗಾತ್ರ ಸಣ್ಣದಿದೆ, ಮುಚ್ಚಿಹೋಗಿದೆ ನೋಡಿಕೊಂಡು ಶಾಶ್ವತವಾಗಿ ಅವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.