ADVERTISEMENT

ರಾಜಕಾಲುವೆ ಸಂರಕ್ಷಣೆ ಬಿಬಿಎಂಪಿ ಹೊಣೆ: ಎಸಿಎಸ್‌

ಒತ್ತುವರಿ ತೆರವು– ಬದ್ಧತೆ ಪ್ರದರ್ಶಿಸಿ: ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 6:11 IST
Last Updated 8 ಏಪ್ರಿಲ್ 2022, 6:11 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರದಲ್ಲಿ ಅಭಿವೃದ್ಧಿಪಡಿಸಿದ ಬಡಾವಣೆಗಳ ಕೆರೆ ಹಾಗೂ ರಾಜಕಾಲುವೆಗಳು ಬಿಬಿಎಂಪಿಗೆ ಅಧಿಕೃತವಾಗಿ ಹಸ್ತಾಂತರ ಆಗದಿದ್ದರೂ ಅವು ಪಾಲಿಕೆಯದೇ ಸ್ವತ್ತು. ತನ್ನ ವ್ಯಾಪ್ತಿಯ ಕೆರೆಗಳು ಹಾಗೂ ರಾಜಕಾಲುವೆಗಳು ಒತ್ತುವರಿಯಾಗದಂತೆ ಸಂರಕ್ಷಿಸಲು ಬಿಬಿಎಂಪಿ ಕಟಿಬದ್ಧವಾಗಿರಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಸೂಚಿಸಿದ್ದಾರೆ.

ಕೆರೆ ಹಾಗೂ ರಾಜಕಾಲುವೆಗಳ ಸಂರಕ್ಷಣೆಯ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಬಿಡಿಎ ಹಾಗೂ ಬಿಬಿಎಂಪಿಯ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಗೊಂದಲ ನಿವಾರಿಸುವ ಉದ್ದೇಶದಿಂದ ಅವರು ಪಾಲಿಕೆಯ ಮುಖ್ಯ ಆಯುಕ್ತರಿಗೆ ಹಾಗೂ ಬಿಡಿಎ ಆಯುಕ್ತರಿಗೆ ಬುಧವಾರ ಪತ್ರ ಬರೆದಿದ್ದಾರೆ.

ಸುಬ್ರಹ್ಮಣ್ಯಪುರ ಕೆರೆ, ಕಗ್ಗದಾಸಪುರ ಕೆರೆ, ಬೇಗೂರು ಕೆರೆ ಹಾಗೂ ಕೆ.ಆರ್‌.ಪುರ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಏ.1ರಂದು ಕೈಗೆತ್ತಿಕೊಂಡಿತ್ತು. ಈ ಪ್ರಕರಣಗಳಲ್ಲಿ ಸರ್ಕಾರ, ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಕೂಡಾ ಪ್ರತಿವಾದಿಗಳು. ಕೆಲವು ಕಡೆ ಕೆರೆ ಜಾಗ ಹಾಗೂ ಅದರ ಮೀಸಲು ಪ್ರದೇಶಗಳು ಒತ್ತುವರಿ ಆಗಿರುವುದರಿಂದ ಕೆರೆಗಳ ಸಮಗ್ರತೆ ಕಾಯ್ದುಕೊಳ್ಳುವುದಕ್ಕೆ ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಅಡ್ಡಿ ಉಂಟಾಗಿದೆ. ರಾಜಕಾಲುವೆಗಳೂ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಬೇಕಿದೆ ಎಂದು ಅರ್ಜಿದಾರರು ಹೈಕೋರ್ಟ್‌ ಗಮನ ಸೆಳೆದಿದ್ದರು.

ADVERTISEMENT

‘ಈ ರಾಜಕಾಲುವೆಗಳು ಇನ್ನೂನಮಗೆ ಹಸ್ತಾಂತರವಾಗಿಲ್ಲ. ಅವುಗಳನ್ನುಬಿಡಿಎ ಹಸ್ತಾಂತರ ಮಾಡಿದ ಬಳಿಕ
ಒತ್ತುವರಿ ತೆರವು ಕಾರ್ಯ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಪರ ವಕೀಲರು ವಿಚಾರಣೆ ಸಂದರ್ಭದಲ್ಲಿತಿಳಿಸಿದ್ದರು. ರಾಜಕಾಲುವೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಅಧಿಸೂಚನೆ ಹೊರಡಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಮತ್ತು ಬಿಡಿಎಗೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

‘2020ರ ಬಿಬಿಎಂಪಿ ಕಾಯ್ದೆಯ ಪ್ರಕಾರ ರಾಜಕಾಲುವೆಗಳು ಹಾಗೂ ಸರ್ಕಾರಿ ಜಾಗಗಳು ಒತ್ತುವರಿ ಆಗದಂತೆ ಸಂರಕ್ಷಣೆ ಮಾಡುವುದು ಬಿಬಿಎಂಪಿಯ ಆದ್ಯ ಕರ್ತವ್ಯ. ಪಾಲಿಕೆಯ ವ್ಯಾಪ್ತಿಯ ಎಲ್ಲ ರಾಜಕಾಲುವೆಗಳು ಈಗಾಗಲೇ ಬಿಬಿಎಂಪಿಯ ಅಧೀನದಲ್ಲೇ ಇವೆ. ಹಾಗಾಗಿ ಅವುಗಳ ಹಸ್ತಾಂತರಕ್ಕೆ ಸರ್ಕಾರವು ಪ್ರತ್ಯೇಕ ಅಧಿಸೂಚನೆ ಪ್ರಕಟಿಸುವ ಅಗತ್ಯ ಇರುವುದಿಲ್ಲ. ಹಾಗಾಗಿ ಬಿಬಿಎಂಪಿ ಈ ಕುರಿತು ಬದ್ಧತೆಯನ್ನು ಪ್ರದರ್ಶಿಸಬೇಕು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

‘ಬಿಡಿಎ ತಾನು ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ಇದುವರೆಗೆ ಬಿಬಿಎಂಪಿಗೆ ಹಸ್ತಾಂತರ ಮಾಡಿಲ್ಲದೇ ಇದ್ದರೆ, ಅಲ್ಲಿನ ರಾಜಕಾಲುವೆಗಳನ್ನು ಮಾತ್ರ ಬಿಬಿಎಂಪಿಗೆ ಹಸ್ತಾಂತರಿಸುವ ಬದಲು ಇಡೀ ಬಡಾವಣೆಯ ಹಸ್ತಾಂತರಕ್ಕೆ ಕ್ರಮಕೈಗೊಳ್ಳಬೇಕು. ಈ ಕುರಿತು ಮುಂದಿನ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ಗೂ ಮನವರಿಕೆ ಮಾಡಲಾಗುತ್ತದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.