ರಾಜರಾಜೇಶ್ವರಿನಗರ: ಹದಿನೈದು ವರ್ಷಗಳ ನಂತರ ಅರಣ್ಯ ನೌಕರರ ಬಡಾವಣೆಯ ರಸ್ತೆಗಳಿಗೆ ಮರಗಳ ಬುಡವನ್ನೂ ಬಿಡದಂತೆ ಡಾಂಬರು ಹಾಕಲಾಗಿದೆ.
ನಗರಸಭೆ ಅವಧಿಯಲ್ಲಿ ಬಡಾವಣೆ ನಿರ್ಮಿಸಿದ ಸಂದರ್ಭದಲ್ಲಿ ರಸ್ತೆ ಮತ್ತು ಒಳಚರಂಡಿ ನಿರ್ಮಿಸಲಾಗಿತ್ತು. ಬಿಬಿಎಂಪಿಗೆ ಸೇರ್ಪಡೆ ನಂತರ ಕಾಮಗಾರಿ ನಡೆದಿರಲಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ನಿವಾಸಿಗಳೂ ಒತ್ತಡ ತಂದರೂ, ಪ್ರಯೋಜನವಾಗಿರಲಿಲ್ಲ.
ಡಿ.ಕೆ. ಸುರೇಶ್ ಅವರು ಲೋಕಸಭೆ ಸದಸ್ಯರಾಗಿದ್ದಾಗ ಬಡಾವಣೆಗೆ ಭೇಟಿ ನೀಡಿದ್ದಾಗ, ನಾಗರಿಕರು ರಸ್ತೆ ಅಭಿವೃದ್ಧಿಗೆ ಮನವಿ ಮಾಡಿಕೊಂಡಿದ್ದರು. ಇದೀಗ ರಸ್ತೆ ಅಭಿವೃದ್ಧಿಯಾಗಿದೆ.
‘ಅರಣ್ಯ ಪ್ರದೇಶವಾಗಿದ್ದ ಅರಣ್ಯ ನೌಕರರ ಬಡಾವಣೆ ರಸ್ತೆ ಡಾಂಬರೀಕರಣದಿಂದ ಕಂಗೊಳಿಸುತ್ತಿದೆ. ಆದರೆ, ಅಧಿಕಾರಿಗಳಿಗೆ ಉತ್ಸಾಹ ಹೆಚ್ಚಾಗಿ, ರಸ್ತೆ ಬದಿಯಲ್ಲಿರುವ ಮರಗಳ ಬುಡಗಳಿಗೂ ಡಾಂಬರು ಹಾಕಿದ್ದಾರೆ. ಈಗಾಗಲೇ ಹಲವು ಮರಗಳಿಗೆ ಬೆಂಕಿ ಇಟ್ಟಿದ್ದರು. ಇದೀಗ, ಬಿಬಿಎಂಪಿ ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮರಗಳ ಬುಡಕ್ಕೇ ಬಿಸಿ ಡಾಂಬರು ಬಿದ್ದು, ಮರಗಳು ಹಾಳಾಗಲಿವೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರನಾರಾಯಣ, ‘ಮರದ ಬೇರುಗಳಿಗೆ ನೀರು ಸೇರುವಂತೆ ಬುಡದ ಸುತ್ತಹಾಕಿರುವ ಡಾಂಬರು ತೆರವುಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.
ಕಾರ್ಯಪಾಲಕ ಎಂಜಿನಿಯರ್ ಪಾಪರೆಡ್ಡಿ ಮಾತನಾಡಿ, ‘ಡಾಂಬರೀಕರಣ ಮುಗಿದಿದೆ. ಇನ್ನು ರಸ್ತೆ ಚರಂಡಿಗಳನ್ನು ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.