ADVERTISEMENT

ನೀರು, ನಾರಿಯಲ್ಲಿ ಅಡಗಿದೆ ದೇಶದ ಭವಿಷ್ಯ: ರಾಜೇಂದ್ರಸಿಂಗ್

​ಪ್ರಜಾವಾಣಿ ವಾರ್ತೆ
Published 19 ಮೇ 2019, 20:09 IST
Last Updated 19 ಮೇ 2019, 20:09 IST
   

ಬೆಂಗಳೂರು: ‘ನೀರು ಎಂದರೆ ಜೀವನ, ನಾರಿ ಎಂದರೆ ಪ್ರಕೃತಿ, ನದಿ ಎಂದರೆ ಹರಿವಿನ ಮೂಲ. ಹಾಗಾಗಿ‌ ಇವುಗಳನ್ನು ಗೌರವಿಸಬೇಕಾದ ಅಗತ್ಯವಿದೆ. ಈ ಮೂರರಲ್ಲಿ ದೇಶದ ಭವಿಷ್ಯ ಅಡಗಿದೆ’ ಎಂದು ಜಲತಜ್ಞ ರಾಜೇಂದ್ರಸಿಂಗ್ ಅಭಿಪ್ರಾಯಪಟ್ಟರು.

ರಾಗಿಕಣದ ನೂರನೇ ವಾರದ ಆಚರಣೆ ಪ್ರಯುಕ್ತ ಬನ್ನೇರುಘಟ್ಟ ರಸ್ತೆಯ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ನೀರಿನ ಮಹತ್ವ’ ಕುರಿತ ಸಂವಾದದಲ್ಲಿ ಅವರು‌ ಮಾತನಾಡಿದರು.

‘ತಾಯಿ ತನ್ನ ಮಗುವನ್ನು ಪೋಷಿಸುವ ಹಾಗೆಯೇ ಪ್ರಕೃತಿಯನ್ನು ಪ್ರತಿಯೊಬ್ಬರೂ ಪೋಷಿಸಬೇಕು. ಆದರೆ, ಕೆಲವು ವರ್ಷಗಳಿಂದ ದೇಶದಲ್ಲಿ‌ ಆ ರೀತಿಯ ಪೋಷಣೆ ಸಂಸ್ಕೃತಿ‌ ಕಡಿಮೆಯಾಗುತ್ತಿದೆ’ ಎಂದರು.

ADVERTISEMENT

‘ನೀರಿನ‌ ಕುರಿತು ಅಧ್ಯಯನ ನಡೆಸುವ ವಿಶ್ವವಿದ್ಯಾಲಯಗಳು ಭಾರತದಲ್ಲಿಲ್ಲ. ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಕಲಿತವರಿಗಿಂತ ಹವಾಮಾನದ ಕುರಿತು‌ ರೈತರೇ ಹೆಚ್ಚು ಜ್ಞಾನ ಹೊಂದಿರುತ್ತಾರೆ. ಭಾರತದಲ್ಲಿ ರೈತರನ್ನು ಶೋಷಿಸುವ ಯೋಜನೆಗಳಿವೆ. ಆದರೆ, ಅವರನ್ನು ಪೋಷಿಸುವ ಯಾವ ಯೋಜನೆಗಳು ಇಲ್ಲ’ ಎಂದು ವಿಷಾದಿಸಿದರು.

‘ರಾಜಸ್ಥಾನದಲ್ಲಿ‌ ನೀರಿನ ಸಂಸತ್ತನ್ನು ಮಾಡಿ ಜಲಮೂಲಗಳನ್ನು ಅಭಿವೃದ್ಧಿಪಡಿಸಿದೆವು. ಬಳಿಕ ಅಲ್ಲಿನ ಸರ್ಕಾರ ಮೀನುಗಾರಿಕೆ ಮಾಡುತ್ತೇವೆ ಎಂದು ಕ್ಯಾತೆ ತೆಗೆಯಿತು. ನಾವು ಅದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದೆವು. ಕೊನೆಗೂ ನ್ಯಾಯ ನಮ್ಮ ಪರವಾಯಿತು’ ಎಂದು ಅನುಭವ ಹಂಚಿಕೊಂಡರು.

‘ಜಲ ಸಂರಕ್ಷಣೆಗಾಗಿ ಕರ್ನಾಟಕದಲ್ಲಿ ನೀರಿನ‌ ಸಂಸತ್ತನ್ನು ರಚನೆ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ನಾವೆಲ್ಲಾ ಕೈಜೋಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.