ADVERTISEMENT

ಕಂಟೊನ್ಮೆಂಟ್ ರೈಲ್ವೆ ಕಾಲೊನಿಯಲ್ಲಿರುವ 368 ಮರ ಉಳಿಸಲು ಸಿಎಂಗೆ ರಾಮಸ್ವಾಮಿ ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:25 IST
Last Updated 7 ಜೂನ್ 2025, 16:25 IST
ಎ.ಟಿ.ರಾಮಸ್ವಾಮಿ
ಎ.ಟಿ.ರಾಮಸ್ವಾಮಿ   

ಬೆಂಗಳೂರು: ‘ಕಂಟೋನ್ಮೆಂಟ್ ರೈಲ್ವೆ ಕಾಲೊನಿಯಲ್ಲಿರುವ 368 ಮರಗಳನ್ನು ಉಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಮರಗಳನ್ನು ಕಡಿಯಲು ಅನುಮತಿ ನೀಡದಂತೆ ಬಿಬಿಎಂಪಿಯ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರಿಗೆ ನಿರ್ದೇಶನ ನೀಡಬೇಕು. ಈ ಪ್ರದೇಶವನ್ನು ಜೀವ ವೈವಿಧ್ಯ ವನವನ್ನಾಗಿ ಮಾಡಬೇಕು’ ಎಂದು ಕೋರಿದ್ದಾರೆ.

‘368 ಮರಗಳನ್ನು ಉಳಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಸಚಿವರಿಗೆ ಏಪ್ರಿಲ್‌ 29 ಮತ್ತು ಮೇ 17ರಂದು ನಮ್ಮ‌ ಸಂಘಟನೆ ವತಿಯಿಂದ ಪತ್ರ ಬರೆಯಲಾಗಿತ್ತು. ಸಂಘಟನೆಯ ಸದಸ್ಯರು, ಸಚಿವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳಲು ವಿನಂತಿಸಿದ್ದರು.  ಬಿಬಿಎಂಪಿ ಅರಣ್ಯ ವಿಭಾಗ, ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದು ಅರಣ್ಯ ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು. ಆದ್ದರಿಂದ ತಾವು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ರೈಲ್ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ’ಯವರು, ಕಂಟೊನ್ಮೆಂಟ್ ರೈಲ್ವೆ ಕಾಲೊನಿಯಲ್ಲಿ ಐದು ಎಕರೆ ಜಾಗವನ್ನು ಬಾಗ್ಮನೆ ಐ.ಟಿ ಕಂಪನಿಯವರಿಗೆ ಗುತ್ತಿಗೆ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ, ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅಡ್ಡಿಯಾಗಿರುವ 368 ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ರೈಲ್ವೆ ಅಧಿಕಾರಿಗಳು ಬಿಬಿಎಂಪಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ಡಿಸಿಎಫ್‌  ಮರಗಳನ್ನು ಕಡಿಯಲು ಸಾರ್ವಜನಿಕರ ಆಕ್ಷೇಪಣೆಗೆ ಮೇ 20ರಂದು ಸಭೆ ನಡೆಸಿದರು. ಮರಗಳನ್ನು ಕಡಿಯಲು ಅನುಮತಿ ಕೊಡಬಾರದು, ಐಟಿ ಕಂಪನಿ ಕಟ್ಟಡ ಕಟ್ಟಲು ಬೇರೆ ಕಡೆ ಜಾಗ ಕೊಡಿ ಎಂದು ನೂರಾರು ಜನರು ಒಕ್ಕೊರಲಿನಿಂದ ಆಗ್ರಹಿಸಿದ್ದರು. ಮರಗಳನ್ನು ಕಡಿಯಲು ಇಷ್ಟು ವಿರೋಧ ಇದ್ದರೂ ಬಿಬಿಎಂಪಿಯ ಡಿಸಿಎಫ್ ಮರಗಳನ್ನು ಕಡಿಯಲು ಅನುಮತಿ ನಿರಾಕರಿಸಿ ಇನ್ನೂ ಆದೇಶ ಹೊರಡಿಸಿಲ್ಲ’ ಎಂದು ಹೇಳಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯು ವ್ಯಕ್ತಿ ಸಮಾಜ ಮತ್ತು ಸರ್ಕಾರದ ಆದ್ಯತೆಯಾಗಬೇಕಾಗಿದೆ. ಜೀವ ವೈವಿಧ್ಯ ಉಳಿದರೆ ಸಕಲ ಜೀವ ಸಂಕುಲ ಉಳಿಯಲಿದೆ
ಎ.ಟಿ. ರಾಮಸ್ವಾಮಿ ಅಧ್ಯಕ್ಷ ‘ಪರಿಸರಕ್ಕಾಗಿ ನಾವು’ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.