ADVERTISEMENT

ರಮೇಶ– ಯೋಗೇಶ್ವರ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:23 IST
Last Updated 14 ಮೇ 2019, 20:23 IST

ಬೆಂಗಳೂರು: ಕಾಂಗ್ರೆಸ್‌ ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ ಮಂಗಳವಾರ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕಂಪನ ಸೃಷ್ಟಿಸುವ ಜೊತೆಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ವದಂತಿಗಳ ಮಧ್ಯೆ ಈ ಇಬ್ಬರು ಇದ್ದಕ್ಕಿದ್ದಂತೆ ಮಾತುಕತೆ ನಡೆಸಿದ್ದಾರೆ.

ಸೆವೆನ್ ಮಿನಿಸ್ಟರ್ ಕಾಲೊನಿಯಲ್ಲಿರುವ ರಮೇಶ ಅವರ ನಿವಾಸದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ. ಆ ಬೆನ್ನಲ್ಲೇ ನೆಲಮಂಗಲ ಬಿಜೆಪಿ ಮುಖಂಡ ನಾಗರಾಜು ಕೂಡಾ ರಮೇಶ ಅವರನ್ನು ಭೇಟಿ ಮಾಡಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಸೂಚನೆಯಂತೆ ಯೋಗೇಶ್ವರ ಜೊತೆ ಬಿಜೆಪಿ ಮುಖಂಡರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ವಿಚಾರಿಸಿದಾಗ, ‘ರಮೇಶ ಅವರ ಆರೋಗ್ಯ ವಿಚಾರಿಸಲು ಹೋಗಿದ್ದೆ’ ಎಂದಷ್ಟೆ ಯೋಗೇಶ್ವರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.