ADVERTISEMENT

ಅಶ್ಲೀಲ, ಅವಹೇಳನಕಾರಿ ಸಂದೇಶ ಪ್ರಕರಣ: 43 ಖಾತೆಗಳ ವಿರುದ್ದ ರಮ್ಯಾ ದೂರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 15:34 IST
Last Updated 28 ಜುಲೈ 2025, 15:34 IST
ರಮ್ಯಾ 
ರಮ್ಯಾ    

ಬೆಂಗಳೂರು: ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್‌ ಅವರಿಗೆ ಸೋಮವಾರ ಲಿಖಿತ ದೂರು ನೀಡಿದರು. 

ಅವಹೇಳನಕಾರಿ ಸಂದೇಶಗಳನ್ನು ಗಮನಿಸಿದ್ದ ರಮ್ಯಾ ಅವರು ದರ್ಶನ್‌ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸೋಮವಾರ ಸಂಜೆ ನೇರವಾಗಿ ಕಮಿಷನರ್ ಕಚೇರಿಗೆ ಬಂದು ನಾಲ್ಕು ಪುಟಗಳ ದೂರು ನೀಡಿದರು. 43 ಖಾತೆಗಳನ್ನು ಉಲ್ಲೇಖಿಸಿ ದೂರು ನೀಡಿ ಕ್ರಮಕ್ಕೆ ಕೋರಿದರು.

‘ದೂರನ್ನು ಸ್ವೀಕರಿಸಲಾಗಿದೆ. ದೂರಿನ ಪ್ರತಿಯನ್ನು ಸೈಬರ್‌ ಠಾಣೆಗೆ ವರ್ಗಾವಣೆ ಮಾಡಿ ತನಿಖೆಗೆ ಸೂಚಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್‌ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಕಳೆದ ವಾರ ಛೀಮಾರಿ ಹಾಕಿತ್ತು. ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿತ್ತು. ಇದರ ಬೆನ್ನಲ್ಲೇ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದ ರಮ್ಯಾ, ‘ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್‌ ಒಂದು ಭರವಸೆಯ ಕಿರಣವಿದ್ದಂತೆ. ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ’ ಎಂದು ಅದರಲ್ಲಿ ಉಲ್ಲೇಖಿಸಿದ್ದರು.

ಈ ಪೋಸ್ಟ್‌ ಬಳಿಕ ರಮ್ಯಾ ಅವರ ಇನ್‌ಸ್ಟಾಗ್ರಾಂ ಖಾತೆಗಳಿಗೆ ಅವಹೇಳನಕಾರಿ ಸಂದೇಶಗಳು ಬಂದಿವೆ. ಇವುಗಳನ್ನು ರಮ್ಯಾ ಸ್ಕ್ರೀನ್‌ಶಾಟ್‌ ತೆಗೆದಿಟ್ಟುಕೊಂಡಿದ್ದರು. ಭಾನುವಾರ (ಜುಲೈ 27) 9 ಸ್ಕ್ರೀನ್‌ ಶಾಟ್‌ಗಳನ್ನು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದ ರಮ್ಯಾ, ‘ರೇಣುಕಸ್ವಾಮಿಯ ಸಂದೇಶಗಳಿಗೂ ಡಿ ಬಾಸ್‌ ಫ್ಯಾನ್ಸ್‌ ಸಂದೇಶಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸ್ತ್ರೀದ್ವೇಷಿ ಮನಃಸ್ಥಿತಿಯುಳ್ಳವರು ಮಾಡುವ ಇಂತಹ ಟ್ರೋಲ್ಸ್‌ಗಳಿಂದಲೇ ಮಹಿಳೆಯರು ಮತ್ತು ಯುವತಿಯರು ಕಿರುಕುಳ, ಅತ್ಯಾಚಾರ ಮತ್ತು ಕೊಲೆಗೆ ಒಳಗಾಗುತ್ತಿದ್ದಾರೆ’ ಎಂಬ ಪೋಸ್ಟ್‌ ಹಾಕಿದ್ದರು.

ಫೈರ್‌ ಖಂಡನೆ: ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದವರ ವಿರುದ್ಧ ತಕ್ಷಣದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಫಿಲಂ ಇಂಡಸ್ಟ್ರಿ ಫಾರ್‌ ರೈಟ್ಸ್‌ ಆ್ಯಂಡ್‌ ಈಕ್ವಾಲಿಟಿ(ಫೈರ್‌) ಪತ್ರ ಬರೆದಿದೆ.

‘ರಮ್ಯಾ ಅವರ ವಿರುದ್ಧ ನಡೆಯುತ್ತಿರುವ ದ್ವೇಷಪೂರಿತ ದೌರ್ಜನ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನವಾಗಿದೆ. ಇದು ಆನ್‌ಲೈನ್‌ನಲ್ಲಿ ಮಹಿಳಾ ದ್ವೇಷದ ಆಳವಾದ ಸಮಸ್ಯೆಯನ್ನು ತೋರಿಸುತ್ತದೆ’ ಎಂದು ಫೈರ್‌ ಉಲ್ಲೇಖಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ‘ತಮ್ಮ ಮಾತಿನಿಂದಲೇ ಓರ್ವ ಮೂರ್ಖ ಗುರುತಿಸಿಕೊಳ್ಳುತ್ತಾನೆ. ಬುದ್ಧಿವಂತನೊಬ್ಬ ತನ್ನ ಮೌನದಿಂದಲೇ ಗುರುತಿಸಿಕೊಳ್ಳುತ್ತಾನೆ’ ಎಂದು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರೂ ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಕಿದ್ದಾರೆ.  

ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣೋ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಬೇಕು.
–ವಿನಯ್‌ ರಾಜ್‌ಕುಮಾರ್‌, ನಟ (ಇನ್‌ಸ್ಟಾಗ್ರಾಂ ಪೋಸ್ಟ್‌)

ಮಹಿಳಾ ಆಯೋಗದಿಂದಲೂ ಪತ್ರ:

‘ರಮ್ಯಾ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸೂಚಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್‌ ಕಮಿಷನರಿಗೆ ಪತ್ರ ಬರೆದಿರುವ ನಾಗಲಕ್ಷ್ಮಿ ಅವರು ‘ಈ ಪ್ರಕರಣವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ತೆಗೆದುಹಾಕಬೇಕು. ಕಿಡಿಗೇಡಿಗಳ ಈ ರೀತಿಯ ಕೃತ್ಯದಿಂದ ಮಹಿಳೆಯರ ಸ್ಥಾನಮಾನಕ್ಕೆ ಧಕ್ಕೆ ಆಗುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಏಕಾಂಗಿಯಾಗಿ ಹೋರಾಡುತ್ತೇನೆ’:

‘ಚಿತ್ರರಂಗದ ಕೆಲವರು ನನಗೆ ಬೆಂಬಲ ಸೂಚಿಸಿದ್ದಾರೆ. ಕೆಲವರು ಬಹಿರಂಗವಾಗಿ ಖಂಡನೆ ಮಾಡಲು ಭಯ ಪಟ್ಟಿದ್ದಾರೆ. ಸ್ತ್ರೀದ್ವೇಷಿ ಮನಃಸ್ಥಿತಿಯುಳ್ಳವರ ವಿರುದ್ಧ ಎಲ್ಲರೂ ಧ್ವನಿಯತ್ತಲೇ ಬೇಕು’ ಎಂದು ರಮ್ಯಾ ಹೇಳಿದರು.

ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು ‘ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿರುವುದು ಒಳ್ಳೆಯದಲ್ಲ. ಯಾರೂ ಬೆಂಬಲ ನೀಡದಿದ್ದರೂ ತೊಂದರೆ ಇಲ್ಲ. ನಾನು ಏಕಾಂಗಿಯಾಗಿ ಹೋರಾಡುತ್ತೇನೆ. ದರ್ಶನ್ ಅವರೂ ತಮ್ಮ ಅಭಿಮಾನಿಗಳಿಗೆ ಹೇಳಬೇಕು’ ಎಂದು ಕೋರಿದರು.

‘ನನಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಬಂದಿದೆ. ರೇಣುಕಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡಬೇಕಿತ್ತು ಎಂದೆಲ್ಲಾ ಕಿಡಿಗೇಡಿಗಳು ಪೋಸ್ಟ್ ಹಾಕಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಕಮಿಷನರ್‌ ಭರವಸೆ ನೀಡಿದ್ದಾರೆ’ ಎಂದರು. ‘ವಿಜಯಲಕ್ಷ್ಮೀ ಮತ್ತು ರಕ್ಷಿತಾ ಇಬ್ಬರೂ ಪೋಸ್ಟ್‌ ಹಾಕಿರೋದು ನನ್ನ ಬಗ್ಗೆ ಅಂತ ಅನಿಸೋದಿಲ್ಲ. ನನಗೆ ಅನಿಸುವ ಮಟ್ಟಿಗೆ ರಕ್ಷಿತಾ ಹೇಳಿರೋದು ಬ್ಯಾಡ್ ಟ್ರೋಲ್‍ಗಳ ವಿರುದ್ಧ. ನಾನು ನ್ಯಾಯದ ಪರ ನಮ್ಮ ಹಕ್ಕಿನ ಪರವಾಗಿ ಹೋರಾಡುತ್ತಿದ್ದೇನೆ’ ಎಂದು ರಮ್ಯಾ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.