ADVERTISEMENT

ಅತ್ಯಾಚಾರ ಎಸಗಿ ಜೀವ ಬೆದರಿಕೆ

ಸಂತ್ರಸ್ತೆಯಿಂದ ಪೊಲೀಸರಿಗೆ ದೂರು * ಚಿನ್ನಾಭರಣವನ್ನೂ ಪಡೆದು ವಂಚಿಸಿದ ಆರೋಪಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:40 IST
Last Updated 28 ಮಾರ್ಚ್ 2020, 20:40 IST
   

ಬೆಂಗಳೂರು: ಮೊಬೈಲ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಮದುವೆ ಆಗುವುದಾಗಿ ಹೇಳಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬಂಡೇಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘39 ವರ್ಷದ ಮಹಿಳೆ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ವಿನೋದ್ ಕುಮಾರ್ (41) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಸಾಮಾಜಿಕ ಜಾಲತಾಣವೊಂದರ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ ಮಹಿಳೆ ಫೋಟೊ ಸಮೇತ ತಮ್ಮ ವೈಯಕ್ತಿಕ ವಿವರವನ್ನು ನಮೂದಿಸಿದ್ದರು. ಅದನ್ನು ನೋಡಿ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ, ಸ್ನೇಹ ಬೆಳೆಸಿದ್ದ. ನಂತರ ಮದುವೆ ಆಗುವುದಾಗಿಯೂ ಹೇಳಿದ್ದ. ಹೀಗಾಗಿ ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು.’

ADVERTISEMENT

‘ಹೊಸ ವರ್ಷ ಆಚರಣೆಗಾಗಿ 2019ರ ಡಿ. 31ರಂದು ಮಹಿಳೆಯನ್ನು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಹೋಟೆಲೊಂದಕ್ಕೆ ಆರೋಪಿ ಕರೆಸಿಕೊಂಡಿದ್ದ. ಅಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತನಗೆ ತೊಂದರೆ ಇರುವುದಾಗಿ ಹೇಳಿದ್ದ ಆರೋಪಿ, ಮಹಿಳೆಯಿಂದ ಚಿನ್ನಾಭರಣವನ್ನೂ ಪಡೆದುಕೊಂಡಿದ್ದ. ಮಾ. 21ರಂದು ಮಹಿಳೆಯ ಹುಟ್ಟುಹಬ್ಬವಿತ್ತು. ಅಂದು ಶುಭಾಶಯ ಕೋರಲು ಮನೆಗೆ ಹೋಗಿದ್ದ ಆರೋಪಿ, ಮದ್ಯ ಕುಡಿಸಿ ‍ಪುನಃ ಅತ್ಯಾಚಾರ ಎಸಗಿದ್ದ. ಇದಾದ ನಂತರ ಆರೋ‍ಪಿ ಮಹಿಳೆಯಿಂದ ದೂರವಾಗಿದ್ದ. ಮದುವೆಯಾಗುವಂತೆ ಹಾಗೂ ಚಿನ್ನಾಭರಣವನ್ನು ಮರಳಿಸುವಂತೆ ಕೇಳಿದ್ದಕ್ಕೆ ಆರೋಪಿ ಮಹಿಳೆಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ಸದ್ಯ ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.