ADVERTISEMENT

ಅತ್ಯಾಚಾರ: ಪೊಲೀಸರ ತಳ್ಳಿ ರೌಡಿ ಪರಾರಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 14:43 IST
Last Updated 1 ಏಪ್ರಿಲ್ 2022, 14:43 IST
ರೌಡಿ ಅವೇಜ್
ರೌಡಿ ಅವೇಜ್   

ಬೆಂಗಳೂರು: ನೇಪಾಳ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಬಂಧಿಸಲಾಗಿದ್ದ ರೌಡಿ ಮಹಮ್ಮದ್ ಅವೇಜ್ ಅಲಿಯಾಸ್ ಬಚ್ಚನ್‌ (25), ಬೌರಿಂಗ್ ಆಸ್ಪತ್ರೆ ಬಳಿ ಗುರುವಾರ ರಾತ್ರಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾನೆ.

‘ಶ್ಯಾಂಪುರದ ನಿವಾಸಿ ಅವೇಜ್, ಕೊಲೆ ಯತ್ನ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ 27 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದರು.

‘ಅತ್ಯಾಚಾರ ಎಸಗಿದ್ದ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದರು. ‍ಪರೀಕ್ಷೆ ಮುಗಿಸಿ ಠಾಣೆಗೆ ವಾಪಸು ಕರೆತರಲು ಜೀಪು ಹತ್ತಿಸಲಾಗುತ್ತಿತ್ತು. ಅದೇ ವೇಳೆ ರೌಡಿ ಅವೇಜ್, ‍ಪೊಲೀಸರನ್ನು ತಳ್ಳಿ ಓಡಿ ಹೋಗಿದ್ದಾನೆ. ಬೆನ್ನಟ್ಟಿದರೂ ಆತ ಕೈಗೆ ಸಿಗಲಿಲ್ಲ’ ಎಂದೂ ಹೇಳಿದರು.

ADVERTISEMENT

‘ರೌಡಿ ಪರಾರಿಯಾಗಲು ಕಾರಣವಾಗಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ರೌಡಿ ಪತ್ತೆಗೆ ವಿಶೇಷ ತಂಡವನ್ನೂ ರಚಿಸಲಾಗಿದೆ’ ಎಂದೂ ತಿಳಿಸಿದರು.

ಹಿಡಿದು ಥಳಿಸಿದ್ದ ಜನ: ‘ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 31ರ ಬೆಳಿಗ್ಗೆ ನೇಪಾಳದ ಮಹಿಳೆ ಮೇಲೆ ರೌಡಿ ಅವೇಜ್ ಅತ್ಯಾಚಾರ ಎಸಗಿದ್ದ. ಮಹಿಳೆ ಕೂಗಾಟ ಕೇಳಿ ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಅವೇಜ್‌ನನ್ನು ಹಿಡಿದು ಥಳಿಸಿದ್ದರು. ನಂತರ, ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕೈಗೆ ಒಪ್ಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆ ಹಾಗೂ ಸ್ಥಳೀಯರ ಹೇಳಿಕೆ ಆಧರಿಸಿ ರೌಡಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ವೈದ್ಯಕೀಯ ಪರೀಕ್ಷೆಗೆಂದು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವಾಗಲೇ ಆತ ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.