ADVERTISEMENT

ಯುವತಿ ಮೇಲೆ ದೌರ್ಜನ್ಯ: ಆಟೊ ಚಾಲಕನಿಗೆ ಮಚ್ಚಿನೇಟು

​ಪ್ರಜಾವಾಣಿ ವಾರ್ತೆ
Published 24 ಮೇ 2024, 16:33 IST
Last Updated 24 ಮೇ 2024, 16:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಯುವತಿಯೊಬ್ಬರನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ’ ಎನ್ನಲಾದ ಆಟೊ ಚಾಲಕನ ಮೇಲೆ ಯುವಕನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೇ 4ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಟೊ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯುವಕನನ್ನು ಬಂಧಿಸಲಾಗಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಆಟೊ ಚಾಲಕನನ್ನೂ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಚಿಕ್ಕಮಗಳೂರಿನ ಯುವತಿ ಹಾಗೂ ಕೇರಳದ ಯುವಕ, ಪರಸ್ಪರ ಪರಿಚಯವಾಗಿ ಸ್ನೇಹಿತರಾಗಿದ್ದರು. ಕೆಲಸ ಹುಡುಕಿಕೊಂಡು ಮೇ 4ರಂದು ಒಟ್ಟಿಗೆ ಬೆಂಗಳೂರಿಗೆ ಬಂದಿದ್ದರು. ಜಯನಗರದಲ್ಲಿದ್ದ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಮೆಟ್ರೊ ನಿಲ್ದಾಣ ಬಳಿ ರಾತ್ರಿ ಕಾಯುತ್ತಿದ್ದರು. ಆದರೆ, ಸ್ನೇಹಿತ ಸ್ಥಳಕ್ಕೆ ಬಂದಿರಲಿಲ್ಲ. ಹೀಗಾಗಿ, ವಾಪಸು ಊರಿಗೆ ಹೋಗಲು ತೀರ್ಮಾನಿಸಿದ್ದರು. ರೈಲು ನಿಲ್ದಾಣಕ್ಕೆ ತೆರಳಲು ಆಟೊಗಾಗಿ ಹುಡುಕಾಡುತ್ತಿದ್ದರು’ ಎಂದು ತಿಳಿಸಿವೆ.

‘ಸ್ಥಳಕ್ಕೆ ಬಂದಿದ್ದ ಚಾಲಕ, ಯುವಕ– ಯುವತಿಯನ್ನು ಆಟೊದಲ್ಲಿ ಹತ್ತಿಸಿಕೊಂಡಿದ್ದ. ಮೆಜೆಸ್ಟಿಕ್ ರೈಲು ನಿಲ್ದಾಣದತ್ತ ಹೊರಟಿದ್ದ. ಯುವಕ–ಯುವತಿಯನ್ನ ಮಾತನಾಡಿಸಿ, ಅವರ ಬಗ್ಗೆ ತಿಳಿದುಕೊಂಡಿದ್ದ. ‘ಕೊಠಡಿ ಬೇಕಾ’ ಎಂದು ಚಾಲಕ ಕೇಳಿದ್ದ. ‘ಬೇಡ’ ಎಂದಿದ್ದ ಯುವಕ–ಯುವತಿ, ಆಟೊ ನಿಲ್ದಾಣಕ್ಕೆ ಬಿಡುವಂತೆ ಹೇಳಿದ್ದರು. ‘ಕೆಲಸ ಹುಡುಕಿಕೊಂಡು ಬಂದಿದ್ದೀರಾ. ನನ್ನದೇ ಮನೆ ಇದೆ. ಅದನ್ನು ನೋಡಿ. ಬಾಡಿಗೆಗೆ ಇರಿ’ ಎಂದಿದ್ದ. ಅದಕ್ಕೆ ಒಪ್ಪಿದ್ದ ಯುವಕ–ಯುವತಿ, ಚಾಲಕನ ಜೊತೆ ಹೊರಟಿದ್ದರು’ ಎಂದು ಮೂಲಗಳು ಹೇಳಿವೆ.

ಮಾರ್ಗಮಧ್ಯೆ ಮದ್ಯ ಖರೀದಿ: ‘ಪಿಳ್ಳೆಗಾನಹಳ್ಳಿಯಲ್ಲಿರುವ ತನ್ನ ಮನೆಯತ್ತ ಹೊರಟಿದ್ದ ಚಾಲಕ, ಮಾರ್ಗ ಮಧ್ಯೆ ಮದ್ಯ ಖರೀದಿಸಿಟ್ಟುಕೊಂಡಿದ್ದ. ಮನೆಗೆ ಹೋಗುತ್ತಿದ್ದಂತೆ ಚಾಲಕ ಮದ್ಯ ಕುಡಿದಿದ್ದ. ಯುವಕನಿಗೂ ಕುಡಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ತಡರಾತ್ರಿ ಯುವತಿಯನ್ನು ಎಳೆದಾಡಿದ್ದ ಚಾಲಕ, ತನ್ನ ಪಕ್ಕದಲ್ಲಿ ಮಲಗುವಂತೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪದ ಯುವತಿ, ಕೂಗಾಡಿದ್ದರು. ಮಚ್ಚು ತೋರಿಸಿದ್ದ ಚಾಲಕ, ಕೊಲೆ ಮಾಡುವುದಾಗಿ ಬೆದರಿಸಿದ್ದ. ರಕ್ಷಣೆಗೆ ಹೋಗಿದ್ದ ಯುವಕ, ಅದೇ ಮಚ್ಚಿನಿಂದ ಚಾಲಕನ ತಲೆಗೆ ಹೊಡೆದಿದ್ದ. ನಂತರ, ಯುವಕ–ಯುವತಿ ಮನೆಯಿಂದ ಹೊರಟು ಮೆಜೆಸ್ಟಿಕ್‌ಗೆ ತೆರಳಿ ತಮ್ಮೂರಿಗೆ ಹೋಗಿದ್ದರು’ ಎಂದು ಮೂಲಗಳು ಹೇಳಿವೆ.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಚಾಲಕ, ‘ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ್ದಾರೆ’ ಎಂದು ಸುಳ್ಳು ಹೇಳಿ ದೂರು ನೀಡಿದ್ದ. ತನಿಖೆ ಕೈಗೊಂಡಾಗ, ಯುವಕ–ಯುವತಿ ಪತ್ತೆಯಾಗಿದ್ದರು. ಯುವತಿ ಹೇಳಿಕೆ ಪಡೆದಾಗಲೇ ಚಾಲಕನ ಕೃತ್ಯ ಪತ್ತೆಯಾಯಿತು. ಎರಡೂ ಕಡೆಯಿಂದಲೂ ದೂರು ಪಡೆದು, ಇಬ್ಬರನ್ನೂ ಬಂಧಿಸಲಾಗಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.