ADVERTISEMENT

ಬೆಂಗಳೂರು|ಯುವತಿ ಕೆನ್ನೆಗೆ ಹೊಡೆದ ರ್‍ಯಾಪಿಡೊ ಸ್ಕೂಟಿ ಸವಾರ: ಯುವತಿಯಿಂದಲೂ ಹಲ್ಲೆ

ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 13:40 IST
Last Updated 16 ಜೂನ್ 2025, 13:40 IST
   

ಬೆಂಗಳೂರು: ಯುವತಿಯ ಕೆನ್ನೆಗೆ ಹೊಡೆದ ರ್‍ಯಾಪಿಡೊ ಸ್ಕೂಟಿ ಸವಾರನ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಬಿಟಿಎಂ ಲೇಔಟ್‌ನಲ್ಲಿ (ವಾಟರ್‌ ಟ್ಯಾಂಕ್‌ ಬಳಿ) ನೆಲಸಿರುವ ಶ್ರೇಯಾ ಅವರು ನೀಡಿದ ದೂರು ಆಧರಿಸಿ ಕೆಎ 05 ಕೆಜೆ 2897 ನೋಂದಣಿ ಸಂಖ್ಯೆಯ ಬೈಕ್‌ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಯುವತಿಯ ಕೆನ್ನೆಗೆ ಸವಾರ ಹೊಡೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸವಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸವಾರನಿಗೆ ಯುವತಿ ಹೊಡೆಯುತ್ತಿರುವ ದೃಶ್ಯವೂ ಸೆರೆಯಾಗಿದೆ. ಎರಡೂ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಯುವತಿಯ ದೂರಿನಲ್ಲಿ ಏನಿದೆ?:

‘ಜೂನ್‌ 13ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಬಿಟಿಎಂ ಲೇಔಟ್‌ನಿಂದ ಜಯನಗರದ ಮೂರನೇ ಬ್ಲ್ಯಾಕ್‌ಗೆ ರ್‍ಯಾಪಿಡೊ ಸ್ಕೂಟಿ ಬುಕ್‌ ಮಾಡಿದ್ದೆ. ಬುಕ್‌ ಆದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರ್‍ಯಾಪಿಡೊ ಸ್ಕೂಟಿ ಬಂದಿತ್ತು. ನಿಗದಿತ ಸ್ಥಳಕ್ಕೆ ತಲು‍ಪಿದ ಬಳಿಕ ಸಂಚಾರ ನಿಯಮವನ್ನು ಪಾಲಿಸದೇ ಸ್ಕೂಟಿ ಚಾಲನೆ ಮಾಡಿದ್ದರ ಕುರಿತು ಪ್ರಶ್ನೆ ಮಾಡಿದ್ದೆ. ಅಡ್ಡಾದಿಡ್ಡಿ ಚಾಲನೆ ಮಾಡುವುದೂ ಕಾನೂನು ಬಾಹಿರ ಎಂಬುದಾಗಿ ತಿಳಿಸಿದ್ದೆ. ಆಗ ಸವಾರ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ’ ಎಂದು ಶ್ರೇಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಘಟನೆಯು ಜೂನ್‌ 13ರಂದು ನಡೆದಿತ್ತು. ಘಟನೆಯ ಸಂಬಂಧ ದೂರು ನೀಡುವುದಕ್ಕೆ ಶ್ರೇಯಾ ಅವರಿಗೆ ಇಷ್ಟ ಇರಲಿಲ್ಲ. ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವತಿಯ ಸ್ನೇಹಿತರ ಮನವಿ ಮೇರೆಗೆ ಜೂನ್‌ 16ರಂದು ದೂರು ನೀಡಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

ದೂರು ನೀಡಿದ ಬಳಿಕ ಶ್ರೇಯಾ ಅವರು ಮಾಧ್ಯಮಗಳ ಪ್ರತಿನಿಧಿಗಳ ಜತೆಗೆ ಮಾತನಾಡಿ ‘ಸವಾರ ಬೇರೊಂದು ಮಾರ್ಗದಲ್ಲಿ ನನ್ನನ್ನು ಕರೆದೊಯ್ಯುತ್ತಿದ್ದ. ಅದನ್ನು ಪ್ರಶ್ನಿಸಿದ್ದೆ. ಪದೇ ಪದೇ ಬ್ರೇಕ್‌ ಹಾಕುತ್ತಿದ್ದ’ ಎಂದು ಹೇಳಿದರು.

ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸವಾರ ಬೈಕ್‌ ಸೀಟ್‌ ಮೇಲೆ ಕುಳಿತಿರುತ್ತಾನೆ. ಆಗ ಸವಾರ ಹಾಗೂ ದೂರುದರೆ ಮಧ್ಯೆ ವಾಗ್ವಾದ ನಡೆಯುತ್ತದೆ. ಆಗ ಸವಾರನ ಮೇಲೆ ಯುವತಿ ಹಲ್ಲೆ ಮಾಡುತ್ತಾರೆ. ಈ ದೃಶ್ಯಾವಳಿಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‌

‘ಮೊದಲು ಹೊಡೆದಿದ್ದೇ ಯುವತಿ’:

‘ಬಂದ ಕೂಡಲೇ ಸಿಟ್ಟಿನಿಂದ ಮಾತನಾಡುತ್ತಿದ್ದರು. ಮಾರ್ಗ ಮಧ್ಯೆದ ಜಂಕ್ಷನ್‌ನಲ್ಲಿ ರೆಡ್‌ ಸಿಗ್ನಲ್‌ ಇತ್ತು. ಯುವತಿ ಕಚೇರಿಗೆ ತೆರಳುವುದಕ್ಕೆ ತಡವಾಗಲಿದೆ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗದಲ್ಲಿ ಕರೆದೊಯ್ಯುತ್ತಿದೆ. ಜಯನಗರದ ಮೂರನೇ ಬ್ಲಾಕ್‌ಗೆ ಬಂದಾಗ ಸ್ಕೂಟಿ ನಿಲುಗಡೆ ಮಾಡುವಂತೆ ಕೇಳಿಕೊಂಡರು. ಏಕಾಏಕಿ ಸ್ಕೂಟಿ ನಿಲ್ಲಿಸಿದರೆ ಹಿಂದಿನ ಬರುತ್ತಿದ್ದ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. 100 ಮೀಟರ್‌ನಷ್ಟು ಮುಂದಕ್ಕೆ ಹೋಗಿ ಸ್ಕೂಟಿ ನಿಲುಗಡೆ ಮಾಡಿದ್ದೆ. ನೀನು ಏನ್‌ ಓದಿರುವುದು ಎಂಬುದಾಗಿ ಪ್ರಶ್ನಿಸಿದ್ದರು. ಕುತ್ತಿಗೆಗೂ ಕೈಹಾಕಿದರು. ಟಿಫನ್‌ ಬಾಕ್ಸ್‌ನಲ್ಲಿ ಹೊಡೆದರು. ಯುವತಿ ಹೊಡೆಯುತ್ತಿರುವುದನ್ನು ಸ್ಥಳದಲ್ಲಿದ್ದ ಗಾರೆ ಕೆಲಸಗಾರರು ನೋಡಿದ್ದಾರೆ. ಆಗ ನಾನೂ ಹೊಡೆದಿದ್ದೇನೆ’ ಎಂದು ರ್‍ಯಾಪಿಡೊ ಸ್ಕೂಟಿ ಸವಾರ ಸುಹಾಸ್‌ ಹೇಳಿದರು.

‘ಕಚೇರಿಗೆ ತೆರಳಿ ದೂರು’:

‘ಘಟನೆ ನಡೆದ ಬಳಿಕ ಆಕೆ ಕೆಲಸ ಮಾಡುತ್ತಿದ್ದ ಕಚೇರಿಗೂ ತೆರಳಿ ಮಾಹಿತಿ ನೀಡಿದ್ದೇನೆ. ಪ್ರಕರಣ ಮುಂದುವರೆಸುವುದೂ ಬೇಡ. ಆಕೆಗೆ ಬುದ್ಧಿ ಹೇಳುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದರು. ಹೀಗಾಗಿ ಸುಮ್ಮನಾಗಿದ್ದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.