ADVERTISEMENT

ರೇವ್‌ ಪಾರ್ಟಿ: ‍ಪಬ್ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 19:08 IST
Last Updated 9 ಮೇ 2022, 19:08 IST

ಬೆಂಗಳೂರು: ಜೀವನ್‌ಬಿಮಾನಗರ ಠಾಣೆ ವ್ಯಾಪ್ತಿಯ ಪಬ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, 33 ಮಂದಿಯನ್ನು ಬಂಧಿಸಿದ್ದಾರೆ.

‘ಒಟ್ಸ್’ ಹೆಸರಿನ ಪಬ್‌ನಲ್ಲಿ ಭಾನುವಾರ ರಾತ್ರಿ ‘ರೇವ್ ಪಾರ್ಟಿ’ ಆಯೋಜಿಸಲಾಗಿತ್ತು. ಮದ್ಯ ಹಾಗೂ ಡ್ರಗ್ಸ್ ಪೂರೈಕೆಯೂ ಇತ್ತು. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹರಿಕೃಷ್ಣ ಎಂಬುವವರು ಆಯೋಜಿಸಿದ್ದ ಪಾರ್ಟಿಯಲ್ಲಿ ಸುಮಾರು 50 ಮಂದಿ ಪಾಲ್ಗೊಂಡಿದ್ದರು. ಜೋರಾದ ಸಂಗೀತ ಹಾಕಿಕೊಂಡು ಎಲ್ಲರೂ ನೃತ್ಯ ಮಾಡುತ್ತಿದ್ದರು. ಅದೇ ವೇಳೆ ದಾಳಿ ಮಾಡಿ, ಎಲ್ಲರನ್ನೂ ವಶಕ್ಕೆ ಪಡೆಯಲಾಯಿತು.’

ADVERTISEMENT

‘ವಶಕ್ಕೆ ಪಡೆದಿದ್ದ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆ ಪೈಕಿ 31 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆರೋಪಿ ಹರಿಕೃಷ್ಣ, ಡಿಜೆ (ಡಿಸ್ಕ್‌ ಜಾಕಿ) ಸೆಂಥಿಲ್ ಕುಮಾರ್ ಸೇರಿ 33 ಮಂದಿಯನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘₹3 ಲಕ್ಷ ಮೌಲ್ಯದ ಎಂಡಿಎಂಎ, ಚರಸ್ ಹಾಗೂ ಗಾಂಜಾವನ್ನೂ ಜಪ್ತಿ ಮಾಡಲಾಗಿದೆ. ಬಂಧಿತರ ಪೈಕಿ ಕೆಲವರು ಡ್ರಗ್ಸ್ ಮಾರಾಟಗಾರರೂ ಇದ್ದಾರೆ. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.