ADVERTISEMENT

ರವಿಕುಮಾರ್ ಹೇಳಿಕೆಗೆ ನಕ್ಕ ಡಿಸಿಪಿ: ಸ್ಪಷ್ಟನೆ ಕೇಳಿದ ಸಿ.ಎಸ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 16:01 IST
Last Updated 4 ಜುಲೈ 2025, 16:01 IST
ಎನ್‌.ರವಿಕುಮಾರ್ 
ಎನ್‌.ರವಿಕುಮಾರ್    

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಕುರಿತು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಹೇಳಲಾದ ಸಂದರ್ಭದಲ್ಲಿ ನಕ್ಕಿದ್ದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವೇಗೌಡ ಅವರಿಂದ ಘಟನೆಯ ಸಂಬಂಧ ಸ್ಪಷ್ಟನೆ ಪಡೆಯಲಾಗಿದೆ.

ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜುಲೈ 1ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಎನ್‌.ರವಿಕುಮಾರ್ ಅವರು ಶಾಲಿನಿ ರಜನೀಶ್ ಅವರ ಕುರಿತು ಅಸಂಸದೀಯ ಪದ ಬಳಸಿದಾಗ, ಅಲ್ಲಿಯೇ ಕರ್ತವ್ಯದಲ್ಲಿ ಕರಿಬಸವೇಗೌಡ ಅವರು ಜೋರಾಗಿ ನಕ್ಕಿದ್ದರು. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಘಟನೆಯ ಸಂಬಂಧ ಶಾಲಿನಿ ರಜನೀಶ್ ಅವರು ಕರಿಬಸವೇಗೌಡ ಅವರ ಬಳಿ ಸ್ಪಷ್ಟನೆ ಕೇಳಿದ್ದರು.

‘ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸುತ್ತಿರುವ ಮಾಹಿತಿ ತಿಳಿದು ತಡೆಯಲು ಸ್ಥಳಕ್ಕೆ ಹೋಗಿದ್ದೆ. ರವಿಕುಮಾರ್ ಅವರ ಹೇಳಿಕೆ ನನಗೆ ಗೊತ್ತಿರಲಿಲ್ಲ. ಅವರು ಹೇಳಿದ್ದು ನನಗೆ ಸರಿಯಾಗಿ ಕೇಳಿಸಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಇದೇ ಪ್ರಕರಣದ ಸಂಬಂಧ ಜೆ.ಪಿ. ನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನಾ ಅವರು ನೀಡಿದ ದೂರು ಆಧರಿಸಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

‘ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಲಭ್ಯವಿರುವ ದಾಖಲೆಗಳು, ವಿಡಿಯೊಗಳನ್ನು ಪರಿಶೀಲಿಸುತ್ತಿದ್ದಾರೆ’ ಎಂದು ಗೊತ್ತಾಗಿದೆ.

‘ಪ್ರಾಥಮಿಕ ಹಂತದ ಪ್ರಕ್ರಿಯೆ ನಡೆಸಲಾಗಿದೆ. ಹೇಳಿಕೆಯ ಸಂದರ್ಭದಲ್ಲಿ ಯಾರ್‍ಯಾರು ಸ್ಥಳದಲ್ಲಿದ್ದರು ಎಂಬುದನ್ನು ಪತ್ತೆಹಚ್ಚಿ ಅವರನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.