
ಬೊಮ್ಮನಹಳ್ಳಿ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜನವರಿ 10 ರಂದು ಎಚ್‌ಎಸ್‌ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ ಏರ್ಪಡಿಸಲಾಗಿದೆ.
ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸತ್ಸಂಗ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಶಾಸಕ ಸತೀಶ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ʼಬೆಂಗಳೂರು ನಗರದಲ್ಲಿ ಡ್ರಗ್ ಹಾವಳಿ ಹೆಚ್ಚುತ್ತಿದ್ದು, ಯುವಜನತೆ ಇದಕ್ಕೆ ಬಲಿಯಾಗುತ್ತಿದ್ದಾರೆ. ಎಚ್‌ಎಸ್‌ಆರ್ ಬಡಾವಣೆಯ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಇದು ಆತಂಕಕಾರಿ ಬೆಳವಣಿಗೆ. ಆದ್ದರಿಂದ ಯುವಜನತೆಯನ್ನು ಈ ಪಿಡುಗಿನ ದಾಸರಾಗುವುದನ್ನು ತಡೆಯಲು ರವಿಶಂಕರ ಗುರೂಜಿ ಅವರಿಂದ ಮಹಾಸತ್ಸಂಗ ಹಮ್ಮಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳು ಸೇರಿದಂತೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲಾಗಿದೆʼ ಎಂದರು.
ಮಹಾಸತ್ಸಂಗದಲ್ಲಿ ಹಾಡು, ಸಂಗೀತ, ಯೋಗ, ಧ್ಯಾನ ಮತ್ತು ಗುರೂಜಿಯಿಂದ ಆಶೀರ್ವಚನ ಇರಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಹೆಚ್‌ಎಸ್‌ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ಶಾಸಕರ ಕಚೇರಿಯಲ್ಲಿ ಪಾಸ್‌ಗಳನ್ನು ಪಡೆಯಬಹುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.