ಬೆಂಗಳೂರು: ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನ ಮಾಲೀಕರಿಗೆ ನೀಡುವ ನೋಂದಣಿ ಪ್ರಮಾಣಪತ್ರ ಕಾರ್ಡ್ (ಆರ್‌ಸಿ ಕಾರ್ಡ್), ಚಾಲನಾ ಪರವಾನಗಿ (ಡಿಎಲ್) ಕಾರ್ಡ್ ಸಿಗುತ್ತಿಲ್ಲ. ಮೂರು ತಿಂಗಳಿನಿಂದ ತಾತ್ಕಾಲಿಕವಾಗಿ ಪತ್ರ ನೀಡಲಾಗುತ್ತಿದೆ.
ಕಾರ್ಡ್ ಪೂರೈಸುವ ಗುತ್ತಿಗೆಯನ್ನು ರೋಸ್‌ಮೆರ್ಟ ಟೆಕ್ನಾಲಜಿ ಸಂಸ್ಥೆ ಪಡೆದುಕೊಂಡಿತ್ತು. ಅದರ ಅವಧಿ 15 ವರ್ಷಗಳಾಗಿದ್ದು, 2024ರ ಫೆಬ್ರುವರಿಯಲ್ಲಿ ಕೊನೆಗೊಂಡಿತ್ತು. ಹೊಸ ಟೆಂಡರ್ ಪ್ರಕ್ರಿಯೆ ಆರಂಭವಾಗಿತ್ತು. ಪೂರೈಸಲಾರದ ಷರತ್ತುಗಳನ್ನು ಟೆಂಡರ್‌ನಲ್ಲಿ ವಿಧಿಸಲಾಗಿದೆ ಎಂದು ಪ್ರಕ್ರಿಯೆಯಲ್ಲಿ ಭಾಗವಹಿಸದ ಕಂಪನಿಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರಿಂದ ಕಾರ್ಡ್ ವಿತರಣೆ ಸ್ಥಗಿತಗೊಂಡಿತ್ತು.
ಆರ್‌ಸಿ, ಡಿಎಲ್ ಪಡೆಯುವವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮತ್ತೆ ಮೂರು ತಿಂಗಳು ಕಾರ್ಡ್ ಪೂರೈಸಲು ಹಿಂದಿನ ಗುತ್ತಿಗೆದಾರರಿಗೆ ಹೆಚ್ಚುವರಿ ಅವಧಿ ನೀಡಲಾಗಿತ್ತು. ಆದರೂ, ಕಾರ್ಡ್ ದೊರೆಯದೇ ವಾಹನ ಚಾಲಕರು, ಮಾಲೀಕರು ಪರದಾಡುತ್ತಿದ್ದಾರೆ.
‘ನನ್ನ ವಾಹನಕ್ಕೆ ಸಂಬಂಧಿಸಿ ಆರ್‌ಸಿ ಕಾರ್ಡ್ ಇನ್ನೂ ದೊರತಿಲ್ಲ. ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲಿ ವಿಚಾರಿಸಿದಾಗ ಕಾರ್ಡ್‌ಗಳು ಬರುತ್ತಿಲ್ಲ ಎಂಬ ಉತ್ತರ ಬಂತು. ತಾತ್ಕಾಲಿಕವಾಗಿ ಈ ನೋಂದಣಿಗೆ ಸಂಬಂಧಿಸಿ ಈ ಪತ್ರ ಇಟ್ಟುಕೊಳ್ಳಿ ಎಂದು ವಾಹನದ ಮಾಹಿತಿ ಇರುವ ಪತ್ರ ನೀಡಿದ್ದಾರೆ. ಆದರೆ, ಇದು ಮೂಲ ನೋಂದಣಿ ಪತ್ರಕ್ಕೆ ಬದಲಿ ಅಲ್ಲ ಎಂದು ಬರೆದಿದೆ. ಮಾನ್ಯತೆ ಇಲ್ಲದಿದ್ದರೆ ಈ ಪತ್ರ ಏಕೆ ನೀಡಬೇಕು’ ಎಂದು ಶಿವಮೊಗ್ಗದ ಸುಧೀರ್ ಪ್ರಶ್ನಿಸಿದರು.
‘ಕಾರ್ಡ್‌ಗಳು ಅಗತ್ಯ ಇರುವಷ್ಟು ಪೂರೈಕೆ ಆಗದ್ದರಿಂದ ಸಮಸ್ಯೆಯಾಗಿದೆ. ಬಂದ ಕಾರ್ಡ್‌ಗಳನ್ನು ವಿತರಿಸುತ್ತಿದ್ದೇವೆ. ಉಳಿದವರಿಗೆ ವಾಹನದ ವಿವರಗಳುಳ್ಳ ಪತ್ರವನ್ನು ನೀಡುತ್ತಿದ್ದೇವೆ’ ಎಂದು ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.
ಮುದ್ರಣ ಪ್ರಗತಿಯಲ್ಲಿ: ‘ಕೆಲವರು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆಯಾಗಿತ್ತು. ಈಗ ಕಾರ್ಡ್‌ಗಳು ಮುದ್ರಣವಾಗುತ್ತಿವೆ. ಆದ್ಯತೆ ಮೇರೆಗೆ ಮೊದಲು ವಾಣಿಜ್ಯ ವಾಹನಗಳ ಆರ್‌ಸಿ ಕಾರ್ಡ್ ನೀಡುತ್ತಿದ್ದೇವೆ. ನಿತ್ಯ ಸುಮಾರು 17 ಸಾವಿರ ಕಾರ್ಡ್ ಒದಗಿಸಲಾಗುತ್ತಿದೆ. ಅದರಲ್ಲಿ 13 ಸಾವಿರ ಹೊಸತು ಮತ್ತು ಹಿಂಬಾಕಿ ಪ್ರಕರಣಗಳಲ್ಲಿ 4,000 ಕಾರ್ಡ್‌ಗಳನ್ನು ನಿತ್ಯ ನೀಡಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಬಾಕಿ ಇರುವ ಎಲ್ಲ ಕಾರ್ಡ್‌ಗಳ ಪೂರೈಕೆಯಾಗಲಿದೆ’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಮಾಹಿತಿ ನೀಡಿದರು.
ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿ ಹೊಸ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸರ್ಕಾರದ ಅನುಮೋದನೆ ಸಿಕ್ಕಿದ ಮೇಲೆ ಸ್ಮಾರ್ಟ್ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ ಕಾರ್ಡ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
13ರ ಒಳಗೆ ವಿತರಣೆ ಪೂರ್ಣ
‘ಕೆಲವರು ಕೋರ್ಟ್ ಮೆಟ್ಟಿಲೇರಿದ್ದ ಸೇರಿ ಕೆಲವು ಕಾರಣಗಳಿಂದ ಕಾರ್ಡ್ ವಿತರಣೆಗೆ ತೊಡಕಾಗಿತ್ತು. ಈಗ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ಫೆ.13ರ ಒಳಗೆ ಬಾಕಿ ಇರುವ ಎಲ್ಲರಿಗೂ ಆರ್‌ಸಿ ಡಿಎಲ್ ಕಾರ್ಡ್‌ಗಳ ವಿತರಣೆ ಪೂರ್ಣಗೊಳ್ಳಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.