ADVERTISEMENT

ಬೆಂಗಳೂರು: ಕಾರಿನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 18:54 IST
Last Updated 22 ಮಾರ್ಚ್ 2025, 18:54 IST
<div class="paragraphs"><p>ಕೊಲೆ (ಸಾಂದರ್ಭಿಕ ಚಿತ್ರ)</p></div>

ಕೊಲೆ (ಸಾಂದರ್ಭಿಕ ಚಿತ್ರ)

   

–ಗೆಟ್ಟಿ ಚಿತ್ರ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕಾರಿನಲ್ಲೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿ ಯಲ್ಲಿ ಶನಿವಾರ ನಡೆದಿದೆ. 

ADVERTISEMENT

ಮಾಗಡಿ ತಾಲೂಕಿನ ಕುದೂರು ಮೂಲದ ಲೋಕನಾಥ್ ಸಿಂಗ್(37) ಕೊಲೆಯಾದ ಉದ್ಯಮಿ.

ಕೃತ್ಯ ಎಸಗಿರುವ ಅಪರಿಚಿತ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸಂಜೆ 6 ಗಂಟೆ ಸುಮಾರಿಗೆ ಬಿಜಿಎಸ್ ಲೇಔಟ್ ನಿರ್ಮಾಣ ಹಂತದ ಕಟ್ಟಡದ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು. 

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಲೋಕನಾಥ್ ಸಿಂಗ್ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಾಲ್ಕೈದು ಮಂದಿ ಸ್ನೇಹಿತರ ಜತೆ ಸೋಲದೇವನಹಳ್ಳಿಯ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರಿನಲ್ಲಿ ಬಂದು ಮದ್ಯ ಸೇವಿಸಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಜತೆಯಲ್ಲಿದ್ದವರೇ ಲೋಕನಾಥ್ ಸಿಂಗ್ ಕುತ್ತಿಗೆಗೆ ಮಾರಕಾಸ್ತ್ರದಿಂದ ಚುಚ್ಚಿದ್ದಾರೆ. ಆದರೂ ಲೋಕನಾಥ್, ಪ್ರಾಣ ರಕ್ಷಣೆಗಾಗಿ ಆರೋಪಿಗಳನ್ನು ತಳ್ಳಿ ಕಾರಿನಿಂದ ಇಳಿದು ಸ್ವಲ್ಪ ದೂರ ಓಡಿ ಹೋದರು. ಆದರೆ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಿದ್ದಾರೆ. 

ಪೊಲೀಸರು ಘಟನಾ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು.

‘ಲೋಕನಾಥ್ ಸಿಂಗ್ ಜತೆ ಬಂದಿದ್ದ ಅವರ ಗನ್‌ಮ್ಯಾನ್ ಕೂಡ ನಾಪತ್ತೆಯಾಗಿದ್ದು, ಆತನ ಮೇಲೂ ಅನುಮಾನ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಉದ್ಯಮಿಯಾಗಿದ್ದ ಲೋಕನಾಥ್ ಸಿಂಗ್ ವಿರುದ್ಧ ನಗರದ ಕೆಲ ಠಾಣೆಗಳಲ್ಲಿ ಮೂರಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಗಡಿ ಶಾಸಕರ ಆಪ್ತ?: 

ಕೊಲೆಯಾದ ಲೋಕನಾಥ್ ಸಿಂಗ್ ಮಾಗಡಿ ಶಾಸಕ ಬಾಲಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.