ಬೆಂಗಳೂರು: ರಾಜ್ಯದಲ್ಲಿ ನಡೆದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ರೆಡ್ಡಿ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ರೆಡ್ಡಿ ಜನರ ಹಿತಾಸಕ್ತಿಗೆ ವ್ಯತಿರಿಕ್ತ ತೀರ್ಮಾನ ಕೈಗೊಂಡಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೆಡ್ಡಿ ಜನಸಂಘ ಎಚ್ಚರಿಕೆ ನೀಡಿದೆ.
ಭಾನುವಾರ ನಡೆದ ರೆಡ್ಡಿ ಜನಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಜಯರಾಮರೆಡ್ಡಿ, ‘ರಾಜ್ಯದಲ್ಲಿ ವಾಸ್ತವವಾಗಿ ನಮ್ಮ ಸಮುದಾಯದ ಜನಸಂಖ್ಯೆ 35 ರಿಂದ 40 ಲಕ್ಷದಷ್ಟಿದೆ. ಆದರೆ, ವರದಿಯಲ್ಲಿ ಕೇವಲ 7.5 ಲಕ್ಷ ತೋರಿಸಿದ್ದಾರೆ. ನಮ್ಮ ಸಂಘದಿಂದಲೇ ರೆಡ್ಡಿ ಸಮುದಾಯದ ಜನ ಗಣತಿ ಮಾಡುತ್ತೇವೆ’ ಎಂದು ತಿಳಿಸಿದರು.
‘ನಮ್ಮ ಸಲಹಾ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇತರೆ ಸಚಿವರು ಮತ್ತು ಪಕ್ಷಾತೀತವಾಗಿ ಎಲ್ಲ ಹಾಲಿ, ಮಾಜಿ, ಶಾಸಕರನ್ನು, ಮುಖಂಡರನ್ನು ಭೇಟಿ ಮಾಡಿ ಸಭೆಯ ಅಭಿಪ್ರಾಯಗಳನ್ನು ತಿಳಿಸಲಾಗುವುದು’ ಎಂದು ಹೇಳಿದರು.
‘ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನಮ್ಮ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಸಂಘದ ಶತಮಾನೋತ್ಸವಕ್ಕೆ ಮುನ್ನ ಈ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷರಾದ ವೆಂಕಟಶಿವಾರೆಡ್ಡಿ, ಕೃಷ್ಣಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಖರ್ ರೆಡ್ಡಿ, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.