ADVERTISEMENT

ಕೋವಿಡ್‌ | ಬೆಂಗಳೂರು: ಜುಲೈನಲ್ಲಿ ಸಾವಿನ ಪ್ರಮಾಣದಲ್ಲಿ ಭಾರಿ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 19:30 IST
Last Updated 6 ಆಗಸ್ಟ್ 2020, 19:30 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2020ರ ಜುಲೈ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ. ಕೋವಿಡ್‌ನಿಂದಾಗಿ ದಾಖಲೆ ಸಂಖ್ಯೆಯಲ್ಲಿ ಜನ ಸಾವಿಗೀಡಾಗಿದ್ದು ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ದತ್ತಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಜನರು ಕೋವಿಡ್‌ನಿಂದ ಸತ್ತರೂ ಅದನ್ನು ಗಣನೆಗೆ ತೆಗೆದುಕೊಳ್ಳದಿರುವುದು ಕಂಡುಬಂದಿದೆ.

ಬಿಬಿಎಂಪಿಯ ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿ ಕಚೇರಿಯ ದಾಖಲೆಗಳ ಪ್ರಕಾರ, ಜುಲೈ ತಿಂಗಳಿನಲ್ಲಿ ವಿವಿಧ ಕಾರಣಗಳಿಂದ 6,477 ಮಂದಿ ಮೃತಪಟ್ಟಿದ್ದಾರೆ. 2019ರ ಜುಲೈನಲ್ಲಿ ದಾಖಲಾದ ಮರಣದ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇ 22.7ರಷ್ಟು ಹೆಚ್ಚು. ಈ 6,477 ಸಾವುಗಳಲ್ಲಿ 834 ಮಂದಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿತ್ತು ಎಂಬುದು ಆರೋಗ್ಯ ಇಲಾಖೆಯ ಅಂಕಿ–ಅಂಶಗಳಿಂದ ತಿಳಿಯುತ್ತದೆ. ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚು ಇದೆ.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಕೋವಿಡ್‌ನಿಂದ ಸತ್ತವರ ಸಂಖ್ಯೆಯನ್ನು ಹೊರತುಪಡಿಸಿದರೆ, ಈ ವರ್ಷದ ಜುಲೈನಲ್ಲಿ ಸತ್ತವರ ಪ್ರಮಾಣಕ್ಕೂ 2019ರ ಜುಲೈನಲ್ಲಿ ಸತ್ತವರ ಪ್ರಮಾಣಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ನಗರದಲ್ಲಿ ನಿತ್ಯ ಸರಾಸರಿ 30 ಮಂದಿ ಕೋವಿಡ್‌ನಿಂದ ಹಾಗೂ 60 ಮಂದಿ ಇತರ ಕಾರಣಗಳಿಂದ ಸಾಯುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ದಾಖಲಾಗುತ್ತಿರುವ ಸಾವುಗಳು ಮತ್ತು ಸ್ಮಶಾನಗಳಲ್ಲಿ ಹಾಗೂ ಚಿತಾಗಾರಗಳಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಗಳಿಗೂ ಹೊಂದಾಣಿಕೆ ಇಲ್ಲ ಎಂಬುದು ನಿಜ’ ಎಂದು ಆಯುಕ್ತರು ಒಪ್ಪಿಕೊಂಡರು.

‘ಕೋವಿಡ್‌ನಿಂದ ಮೃತಪಟ್ಟ ಅನೇಕರು ರಾಮನಗರ ಹಾಗೂ ಇತರ ನೆರೆಯ ಜಿಲ್ಲೆಯವರು. ಅವರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದರಿಂದ ಶಿಷ್ಟಾಚಾರ ಪ್ರಕಾರ ಅವರ ಸಾವನ್ನು ಬಿಬಿಎಂಪಿಯಲ್ಲಿ ನೋಂದಾಯಿಸಬೇಕಾಗುತ್ತದೆ. ಆದರೆ, ಆರೋಗ್ಯ ಇಲಾಖೆಯು ಅವರನ್ನು ಆಯಾ ಜಿಲ್ಲೆಯವರು ಎಂದೇ ಪರಿಗಣಿಸುತ್ತದೆ’ ಎಂದು ಅವರು ವಿವರಿಸಿದರು.

‘ನಗರದಲ್ಲಿ ಸಾವಿಗೀಡಾಗುವ ಎಲ್ಲರ ಮೃತದೇಹಗಳನ್ನು ಕೋವಿಡ್‌ ಪರೀಕ್ಷೆಗೆ (ಕ್ಷಿಪ್ರ ಆ್ಯಂಟಿಜೆನ್ ಪರೀಕ್ಷೆ) ಒಳಪಡಿಸುತ್ತಿಲ್ಲ. ವ್ಯಕ್ತಿ ಕೋವಿಡ್‌ನಿಂದ ಸತ್ತರೂ ಅವರ ಬಂಧುಗಳು ಈ ವಿಚಾರವನ್ನು ಮುಚ್ಚಿಟ್ಟು ಸಹಜ ಸಾವಿನ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಮನೆಯಲ್ಲೇ ಸಾವು ಸಂಭವಿಸುವ ಪ್ರಕರಣಗಳಲ್ಲಿ ಇಂತಹದ್ದು ಹೆಚ್ಚು. ಮೃತರು ಕೋವಿಡ್‌ ಲಕ್ಷಣಗಳನ್ನು ಹೊಂದಿದ್ದನ್ನು ಮರೆಮಾಚಿ ವೈದ್ಯರಿಂದ ಸಹಜ ಸಾವಿನ ಪ್ರಮಾಣಪತ್ರ ಪಡೆಯಲಾಗುತ್ತದೆ’ ಎಂದು ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.