ಗೌರಿ ಲಂಕೇಶ್ ನೆನಪಿನಲ್ಲಿ ಬೆಂಗಳೂರಿನಲ್ಲಿ ಗೌರಿ ಮೆಮೊರಿಯಲ್ ಟ್ರಸ್ಟ್ ಆಯೋಜಿಸಿದ್ದ ‘ನಾಲ್ಕನೇ ಅಂಗದ ಮರುನಿರ್ಮಾಣ’ ಚಿಂತನಾ ಕಾರ್ಯಕ್ರಮದಲ್ಲಿ ಗೌರಿ ಭಾವಚಿತ್ರಕ್ಕೆ ಕವಿತಾ ಲಂಕೇಶ್ ಪುಷ್ಪ ಅರ್ಪಿಸಿದರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ದೇಶದಲ್ಲಿ ಎಲ್ಲರನ್ನು ಸಂವಿಧಾನದಿಂದ ದೂರಕ್ಕೆ ಕೊಂಡೊಯ್ಯಲಾಗುತ್ತಿದೆ. ಜನರ ಚಿಂತನೆಯ ಶಕ್ತಿಯನ್ನು ಕೊಂದು ಮೃಗಗಳನ್ನಾಗಿ ಮಾಡಲಾಗುತ್ತಿದೆ’ ಎಂದು ‘ಆರ್ಟಿಕಲ್ 19 ಇಂಡಿಯಾ’ ಸಂಸ್ಥಾಪಕ ಸಂಪಾದಕ ನವೀನ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಗೌರಿ ಲಂಕೇಶ್ ನೆನಪಿನಲ್ಲಿ ಗೌರಿ ಮೆಮೊರಿಯಲ್ ಟ್ರಸ್ಟ್ ಆಯೋಜಿಸಿದ್ದ ‘ನಾಲ್ಕನೇ ಅಂಗದ ಮರುನಿರ್ಮಾಣ’ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧರ್ಮ ರಕ್ಷಣೆಯ ಹೆಸರಲ್ಲಿ ಯುವಜನರಿಂದ ಪುಸ್ತಕ, ಪೆನ್ನು ಕಿತ್ತುಕೊಂಡು ತಲ್ವಾರ್ ಕೊಡುವಂತಹ ಕೆಲಸಗಳಾಗುತ್ತಿವೆ. ಹಿಂದೂ- ಮುಸ್ಲಿಂ–ಕ್ರಿಶ್ಚಿಯನ್ನರ ನಡುವೆ ದ್ವೇಷ ಬಿತ್ತಲಾಗುತ್ತಿದೆ. ಮಹಿಳೆಯರು, ಪುರುಷರು ಕಚ್ಚಾಡುವಂತೆ ಮಾಡಲಾಗುತ್ತಿದೆ‘ ಎಂದರು.
‘ಮನುಷ್ಯತ್ವದ ಎದುರು ಮಂದಿರ–ಮಸೀದಿಗಳನ್ನು ನಿಲ್ಲಿಸುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಆರೋಗ್ಯ, ಶಿಕ್ಷಣವನ್ನು ಖಾಸಗೀಕರಣ ಮಾಡಿ ಬಡವರಿಗೆ ಎಟುಕದಂತೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವಿಶ್ವವಿದ್ಯಾಲಯಗಳಲ್ಲಿ ಚಿಂತಕರು ಇದ್ದಾರೆ. ಸತ್ಯ ಮಾತನಾಡುತ್ತಾರೆ. ಅದಕ್ಕಾಗಿ ವಿಶ್ವವಿದ್ಯಾಲಯಗಳನ್ನು ಖಾಸಗೀಕರಣಗೊಳಿಸಿ ಶುಲ್ಕವನ್ನು ಏರಿಸಲಾಗುತ್ತಿದೆ. ಈ ಮೂಲಕ ಬಡವರ ಮಕ್ಕಳು ವಿಶ್ವವಿದ್ಯಾಲಯಗಳಿಗೆ ಬಾರದಂತೆ, ಅವರ ಮಟ್ಟ ಮೀರಿ ಚಿಂತನೆ ನಡೆಸದಂತೆ ತಡೆಯುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ಯೋಚನೆ ಮಾಡುವವರನ್ನು, ಸತ್ಯ ಮಾತನಾಡುವವರನ್ನು, ಜಾಗೃತಿ ಮೂಡಿಸುವವರನ್ನು ಮೊದಲು ರಕ್ಷಣೆ ಮಾಡಬೇಕಿದೆ’ ಎಂದೂ ಹೇಳಿದರು.
ಉತ್ತರ ಪ್ರದೇಶದ ಪತ್ರಕರ್ತೆ ಮೀನಾ ಕೊತ್ವಾಲ್ ಮಾತನಾಡಿ, ‘ಯಾವುದೇ ಧರ್ಮ ಕಟ್ಟರ್ ಆದರೆ ಮೊದಲು ಮಹಿಳೆ ತೊಂದರೆ ಅನುಭವಿಸುತ್ತಾಳೆ. ಧಾರ್ಮಿಕ ವಿಚಾರಗಳಲ್ಲಿ ನೇರ ಮಾತನಾಡುವ ಮಹಿಳೆಯರನ್ನು ಧರ್ಮಗಳು ಸಹಿಸಿಕೊಳ್ಳುವುದಿಲ್ಲ. ಪೀಳಿಗೆಯನ್ನು ಜಾಗೃತಗೊಳಿಸುತ್ತಿದ್ದ ದಿಟ್ಟ ಪತ್ರಕರ್ತೆ ಗೌರಿಗೆ ಗುಂಡಿಕ್ಕಲು ಇದುವೇ ಕಾರಣ’ ಎಂದರು.
‘ಸರ್ಕಾರದ ಗಿಣಿಯಾಗಿ ಇರುವುದು, ಇಲ್ಲವೇ ಸತ್ಯ ಹೇಳಿ ಸಾಯುವುದು ಈಗ ಪತ್ರಕರ್ತರಿಗಿರುವ ಎರಡು ಆಯ್ಕೆಗಳು. ನಾನು, ಗೌರಿ ಲಂಕೇಶ್ ತರಹ ಸತ್ಯ ಹೇಳುತ್ತೇನೆ. ಸಾವು ಬಂದರೂ ಸರ್ಕಾರ ಆಡಿಸುವ ಸೂತ್ರದ ಗೊಂಬೆಯಾಗಲಾರೆ’ ಎಂದು ದಿಟ್ಟ ನುಡಿಗಳನ್ನಾಡಿದರು.
ಚಿಂತಕರಾದ ತೀಸ್ತಾ ಸೆಟಲ್ವಾಡ್, ಪರಂಜಾಯ್ ಗುಹಾ ಠಾಕುರ್ತಾ, ಹರ್ಷ್ತೋಶ್ ಬಾಲ್, ಸುಮಿತ್ ಚವ್ಹಾಣ್, ಗೀತಾ ಶೇಷು, ಕವಿತಾ ಲಂಕೇಶ್, ಭವರ್ ಮೇಘವಂಶಿ ಮಾತನಾಡಿದರು.
ಚುನಾವಣೆ ಸಮೀಪಿಸುತ್ತಿದೆ. ಇನ್ನು ಮೂರು ತಿಂಗಳಲ್ಲಿ ಏನೇನೋ ವಿದ್ಯಮಾನಗಳು ದೇಶದಲ್ಲಿ ಸಂಭವಿಸಲಿವೆ. ಚುನಾವಣೆ ಗೆಲ್ಲಲು ಮಾಡುವ ಪಿತೂರಿಗಳ ಬಗ್ಗೆ ಎಚ್ಚರದಿಂದ ಇರಬೇಕು–ನವೀನ್‌ಕುಮಾರ್, ‘ಆರ್ಟಿಕಲ್ 19 ಇಂಡಿಯಾ’ ಸಂಸ್ಥಾಪಕ ಸಂಪಾದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.