ADVERTISEMENT

ಗಾನ ಗಾರುಡಿಗನಿಗೆ ಗೀತ ನಮನ: ಶಿವಮೊಗ್ಗ ಸುಬ್ಬಣ್ಣ ಒಡನಾಟ ಸ್ಮರಿಸಿಕೊಂಡ ಒಡನಾಡಿಗಳು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 4:28 IST
Last Updated 25 ಸೆಪ್ಟೆಂಬರ್ 2022, 4:28 IST
ಗೀತ ನಮನ ಕಾರ್ಯಕ್ರಮದಲ್ಲಿ ಸುಬ್ಬಣ್ಣ ಅವರ ಭಾವಚಿತ್ರಕ್ಕೆ ಪತ್ನಿ ಶಾಂತಾ ಸುಬ್ಬಣ್ಣ ಪುಷ್ಪ ನಮನ ಸಲ್ಲಿಸಿದರು. ಚಂದ್ರಶೇಖರ ಕಂಬಾರ, ನ್ಯಾ.ಎ.ಜೆ. ಸದಾಶಿವ, ಸಿ. ಸೋಮಶೇಖರ್, ಶ್ರೀನಿವಾಸ ಉಡುಪ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಇದ್ದಾರೆ. –ಪ್ರಜಾವಾಣಿ ಚಿತ್ರ‌
ಗೀತ ನಮನ ಕಾರ್ಯಕ್ರಮದಲ್ಲಿ ಸುಬ್ಬಣ್ಣ ಅವರ ಭಾವಚಿತ್ರಕ್ಕೆ ಪತ್ನಿ ಶಾಂತಾ ಸುಬ್ಬಣ್ಣ ಪುಷ್ಪ ನಮನ ಸಲ್ಲಿಸಿದರು. ಚಂದ್ರಶೇಖರ ಕಂಬಾರ, ನ್ಯಾ.ಎ.ಜೆ. ಸದಾಶಿವ, ಸಿ. ಸೋಮಶೇಖರ್, ಶ್ರೀನಿವಾಸ ಉಡುಪ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಇದ್ದಾರೆ. –ಪ್ರಜಾವಾಣಿ ಚಿತ್ರ‌   

ಬೆಂಗಳೂರು:ಕಂಚಿನ ಕಂಠದ ಮೂಲಕ ನಾಡಿನ ಜನರ ಹೃದಯಗಳನ್ನು ‘ಆನಂದಮಯ’ಗೊಳಿಸಿದ್ದ ಶಿವಮೊಗ್ಗ ಸುಬ್ಬಣ್ಣ ಅವರಿಗೆ, ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಅವರದೇ ಗೀತೆಗಳನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.

ಒಡನಾಡಿಗಳು ಹಾಗೂ ಆಪ್ತರು ಸುಬ್ಬಣ್ಣ ಅವರ ಗಾಯನ ಹಾಗೂ ವ್ಯಕ್ತಿತ್ವವನ್ನು ಕೊಂಡಾಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಕಾಡು ಕುದುರೆ ಓಡಿ ಬಂದಿತ್ತಾ’ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ನಾನು ರಚಿಸಿದ ‘ಕಾಡುಕುದುರೆ ಓಡಿ ಬಂದಿತ್ತಾ' ಗೀತೆಯನ್ನು ಸುಬ್ಬಣ್ಣ ಹಾಡಿದ್ದರಿಂದ ಪ್ರಶಸ್ತಿ ದೊರೆಯಿತು.

ADVERTISEMENT

ಈ ಗೀತೆಯ ಬಳಿಕ ನನ್ನ ಸ್ಥಾನಮಾನವೂ ಏರಿತು. ಸಿನಿಮಾ ಗೀತೆಗಳನ್ನು ಇನ್ನಷ್ಟು ಬರೆಯುವಂತೆ ಮನವಿಗಳು ಬಂದವು. ಸಂಗೀತ ಕಾರ್ಯಕ್ರಮಗಳಲ್ಲಿ ನಿರ್ಣಾಯಕನಾಗಿಯೂ ಭಾಗವಹಿಸಿದೆ’ ಎಂದರು.

‘1979ರಲ್ಲಿ ಬಿಡುಗಡೆಯಾದ ‘ಕಾಡು ಕುದುರೆ’ ಚಿತ್ರವನ್ನು ಕೇವಲ ₹ 4 ಲಕ್ಷದಲ್ಲಿ ಮಾಡಿದ್ದೆವು. ಆಗ ನಮ್ಮ ಬಳಿ ಹಣ ಇರಲಿಲ್ಲ. ಆದ್ದರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನವಿ ಸಲ್ಲಿಸಿ, ಸಂಪೂರ್ಣ ತೆರೆಗೆ ವಿನಾಯಿತಿ ಮಾಡಿಸಿ ಕೊಂಡೆವು. ಈ ಚಿತ್ರದಿಂದ ಹಣ ಹಾಗೂ ಜನಪ್ರಿಯತೆ ಬಂದಿತು. ಆ ಕಾಲದಲ್ಲಿ ಗಿರೀಶ ಕಾರ್ನಾಡ, ಲಂಕೇಶ್ ಸಿನಿಮಾ ಮಾಡುತ್ತಿದ್ದರು. ಅವರು ಶ್ರೀಮಂತರಾಗಿದ್ದರೆ, ನಾವು ಬಡವರಾಗಿದ್ದೆವು. ಸಿನಿಮಾ ಮಾಡಲು ಇದ್ದ ಹಿಂಜರಿಕೆ ಹೋಗಲಾಡಿಸಿದವರು ಸುಬ್ಬಣ್ಣ’ ಎಂದು ಸ್ಮರಿಸಿಕೊಂಡರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕ ನಾಗರಾಜ ರಾವ್ ಹವಾಲ್ದಾರ್, ‘1990ರಲ್ಲಿ ಚೌಡಯ್ಯ ಸ್ಮಾರಕ ಭವನದಲ್ಲಿ ಇಬ್ಬರೂ ಒಟ್ಟಾಗಿ ಹಾಡಿದ್ದೆವು. ಅವರ ಗಾಯನ ಮನೆ, ಮನದಲ್ಲಿ ಶಾಶ್ವತವಾಗಿ ಇರುತ್ತದೆ’ ಎಂದು ಹೇಳಿದರು.

‘ನನ್ನ ಕಂಡಾಗ ಹಾಡುತ್ತಿದ್ದರು’: ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್, ‘ಒಮ್ಮೆ‘ಇಳಿದು ಬಾ ತಾಯೇ ಇಳಿದು ಬಾ’ ಗೀತೆ ಹಾಡುವಂತೆ ಸುಬ್ಬಣ್ಣ ಅವರಿಗೆ ಕೇಳಿಕೊಂಡಿದ್ದೆ. ಅವರು ದೊಡ್ಡ ದನಿಯಲ್ಲಿ ಹಾಡಿದ ರೀತಿ ನೋಡಿ ನನಗೆ ಭಯವಾಗಿತ್ತು.

ಅಕ್ಕಪಕ್ಕ ದವರು ಏನು ಅಂದುಕೊಳ್ಳುತ್ತಾರೆಯೋ ಅಂದುಕೊಂಡಿದ್ದೆ. ನಂತರ ನನ್ನ ಕಂಡಾಗಲೆಲ್ಲ ಅದೇ ಹಾಡನ್ನು ಹಾಡು ತ್ತಿದ್ದರು. ಅವರಿಗೆ ಶತ್ರುಗಳೇ ಇರಲಿಲ್ಲ’ ಎಂದು ಸ್ಮರಿಸಿದರು.

ಗಾಯಕ ಪುತ್ತೂರು ನರಸಿಂಹ ನಾಯಕ್, ‘ಸುಬ್ಬಣ್ಣ ಅವರು ಜಾತಿ, ಧರ್ಮ ಮೀರಿದ ಕಲಾವಿದ. ಅವರು ಕೊನೆಯುಸಿರೆಳೆಯುವ ವಾರದ ಮೊದಲು ಪತ್ರೊಡೆ ಮಾಡಿಕೊಂಡು ಅವರ ಮನೆಗೆ ಹೋಗಿದ್ದೆವು. ತುಂಬಾ ಸಂತೋಷದಿಂದ ಅದನ್ನು ಸ್ವೀಕರಿಸಿ, ಸವಿದರು’ ಎಂದು ಹೇಳಿದರು.

ಗಾಯಕ ಶ್ರೀನಿವಾಸ ಉಡುಪ,ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, ಲಹರಿ ವೇಲು ಸೇರಿ ಹಲವರು ಸುಬ್ಬಣ್ಣ ಅವರೊಂದಿಗಿನ ಒಡನಾಟ ಹಂಚಿಕೊಂಡರು.

‘ರಾಜ್ಯಮಟ್ಟದ ಪ್ರಶಸ್ತಿ ಸ್ಥಾಪಿಸಿ’
‘ಸುಬ್ಬಣ್ಣ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸ್ಥಾಪಿಸಬೇಕು. ಈ ಮೂಲಕ ಯುವ ಗಾಯಕರನ್ನೂ ಪ್ರೋತ್ಸಾಹಿಸಲು ಸಾಧ್ಯ.ಕವಿ ರಚಿಸಿದ ಹಾಡಿಗೆ ಉತ್ತಮ ಕಂಠ ಸಿಗದಿದ್ದರೆ ಗೀತೆಚಿರಸ್ಥಾಯಿ ಆಗದು’ ಎಂದುಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಮ ರಾಯಪುರ, ‘ಕರ್ನಾಟಕ ಸುಗಮ ಸಂಗೀತ ಪರಿಷತ್ತಿಗೆ ಸ್ವಂತ ಕಚೇರಿ ಹಾಗೂ ಆದಾಯ ಇಲ್ಲ. ಆದರೂ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದ್ದರಿಂದಲೇ ಪುರಭವನದಲ್ಲಿ ಉಚಿತವಾಗಿ ಕಾರ್ಯಕ್ರಮ ನಡೆಸಲು ಪರಿಷತ್ತಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ನಡೆಸುವ ಕಾರ್ಯಕ್ರಮಗಳಿಗೂ ಉಚಿತವಾಗಿ ವೇದಿಕೆ ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.