ಮಾಗಡಿ: ತಾಲ್ಲೂಕಿನ ಸೋಲೂರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಆರ್ಯ ಈಡಿಗರ ಮಹಾಸಂಸ್ಥಾನ ಮಠದಲ್ಲಿ ಬುಧವಾರ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನೆರವೇರಿತು.
ಭರತ ಹುಣ್ಣಿಮೆ ದಿನದ ಅಂಗವಾಗಿ ಬೆಳಗ್ಗೆ ಮಠದಲ್ಲಿ ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿಗೆ ಪಾದಪೂಜೆ ಮೂಲಕ ಗುರುಪೂಜೆ ನಡೆಯಿತು. ಗಂಗಾ ಪೂಜೆ, ದೇವಿ ಆರಾಧನೆ ಸೇರಿದಂತೆ ಧಾರ್ಮಿಕ ವಿಧಿ, ವಿಧಾನ ನಡೆದವು.
ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯದಿಂದ ಬಂದಿದ್ದ ಜೋಗತಿ ಅಮ್ಮನವರು ಉತ್ಸವ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು.
ವಿವಿಧ ಕಲಾ ತಂಡಗಳು ಪ್ರದರ್ಶನ ಜನರ ಗಮನ ಸೆಳೆದವು. ಜತೆಗೆ ಜೋಗತಿ ನೃತ್ಯ ಉತ್ಸವಕ್ಕೆ ಮತ್ತಷ್ಟು ಮೆರಗು ತಂದಿತು. ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಆರೋಗ್ಯ ಶಿಬಿರ: ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನೂರಕ್ಕೂ ಹೆಚ್ಚು ಮಂದಿಗೆ ಕನ್ನಡಕ ವಿತರಿಸಲಾಯಿತು.
ಮುತ್ತೂಟ್ ಸ್ನೇಹಾಶ್ರಯ ಹಾಗೂ ಕಾವೇರಿ ರಕ್ತ ನಿಧಿ ವತಿಯಿಂದ ನಡೆದ ಆರೋಗ್ಯ ತಪಾಸಣೆಯಲ್ಲಿ ಬೆಂಗಳೂರು ಸ್ಪರ್ಶ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಹೆಸರುಘಟ್ಟದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವೈದೇಹಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಾಸನ್ ಐ ಕೇರ್, ಕೆಎಲ್ಇ ಡೆಂಟಲ್ ಕಾಲೇಜು ವೈದ್ಯರು ಭಾಗವಹಿಸಿದ್ದರು.
ಸೋಲೂರು ಆರ್ಯ ಈಡಿಗರ ಮಠದ ವಿಖ್ಯಾತಾನಂದ ಸ್ವಾಮೀಜಿ, ಎಂ.ತಿಮ್ಮೇಗೌಡ, ಚಿನ್ನೇಗೌಡ, ಜೆ.ಪಿ. ಸುಧಾಕರ್, ಧರ್ಮವಿಜೇತ್, ಹರೀಶ್, ಶ್ರೀಕಾಂತ್, ಸಂಪತ್, ಗೋಪಾಲ್, ವೆಂಕಟೇಶ್, ದುಶ್ಯಂತ್, ಪ್ರಕಾಶ್, ಸಂತೋಷ್, ಗೋಪಿ ಭಟ್, ಶಶಾಂಕ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.