ADVERTISEMENT

Renukaswamy murder case: ದರ್ಶನ್, ಪವಿತ್ರಾ ಗೌಡ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 23:30 IST
Last Updated 10 ಜನವರಿ 2025, 23:30 IST
   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎಲ್ಲಾ 17 ಆರೋಪಿಗಳು ನಗರದ ಸಿಸಿಎಚ್ 57ನೇ ನ್ಯಾಯಾಲಯದ ಮುಂದೆ ಶುಕ್ರವಾರ ಹಾಜರಾದರು.

ಆರೋಪಿಗಳಿಗೆ ಜಾಮೀನು ನೀಡುವ ವೇಳೆ ಪ್ರತಿ ತಿಂಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆರೋಪಿಗಳ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 25ಕ್ಕೆ ಮುಂದೂಡಿದರು.

ದರ್ಶನ್ ತಮ್ಮ ಆಪ್ತ, ನಟ ಧನ್ವೀರ್ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದರು. ಅವರೊಂದಿಗೆ ವಕೀಲರು ಸಹ ಇದ್ದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ನ್ಯಾಯಾಲಯದಲ್ಲಿ ಮುಖಾಮುಖಿಯಾದರು.

ADVERTISEMENT

ದರ್ಶನ್ ನೋಡುತ್ತಿದ್ದಂತೆ ಪವಿತ್ರಾ ಭಾವುಕರಾದರು. ಪವಿತ್ರಾ ಅವರ ಬೆನ್ನುತಟ್ಟಿ ದರ್ಶನ್ ಸಂತೈಸಿದರು. ಕೆಲ ಹೊತ್ತು ಇಬ್ಬರು ಮಾತುಕತೆ ನಡೆಸಿದರು. ಈ ವೇಳೆ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದರು. ಮಾಧ್ಯಮಗಳು ಅವರನ್ನು ಸುತ್ತುವರಿಯುತ್ತಿದ್ದಂತೆ ಇಬ್ಬರೂ ಅಲ್ಲಿಂದ ಹೊರ ನಡೆದರು.

ಜನವರಿ 12ರಿಂದ ಐದು ದಿನ ಮೈಸೂರಿಗೆ ತೆರಳಲು ದರ್ಶನ್‌ಗೆ ನ್ಯಾಯಾಲಯ ಅನುಮತಿ ನೀಡಿದೆ.  

ಇದೇ ವೇಳೆ ಹೊರ ರಾಜ್ಯದ ದೇವಾಲಯಗಳಿಗೆ ತೆರಳಲು ಅನುಮತಿ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಮನವಿಗೂ ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೇ ವ್ಯಾವಹಾರಿಕ ಕೆಲಸಗಳ ನಿಮಿತ್ತ ದೆಹಲಿ, ಮುಂಬೈಗೆ ತೆರಳಲು ಅನುಮತಿ ನೀಡಿದೆ.

ಮತ್ತೊಬ್ಬ ಆರೋಪಿ ನಾಗರಾಜ್‌ಗೆ ಜನವರಿ 10 ರಿಂದ ಫೆಬ್ರುವರಿ 24ರವರೆಗೆ ಮೈಸೂರಿಗೆ ತೆರಳಲು  ಅನುಮತಿ ನೀಡಲಾಗಿದೆ. ಚಿತ್ರದುರ್ಗದ ಆರೋಪಿಗಳಿಗೂ ತಮ್ಮ ಊರಿಗೆ ಹೋಗಲು ಅನುಮತಿ ಕೊಡಲಾಗಿದೆ.

ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮುಂದೂಡಿದ ಬಳಿಕ ಆರೋಪಿಗಳು ಅವರ ವಕೀಲರೊಂದಿಗೆ ಚರ್ಚಿಸಿ ವಾಪಸ್​ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.